Friday, November 20, 2026

ಪ್ರಾಯೋಗಿಕ ಆವೃತ್ತಿ

ಮರು ಮೌಲ್ಯಮಾಪನ | ಎಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದ ಮದ್ದೂರಿನ ವಿದ್ಯಾರ್ಥಿನಿ ಪುನೀತ

ವರದಿ: ಪ್ರಭು ವಿ ಎಸ್

ಮದ್ದೂರು ಪಟ್ಟಣದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪುನೀತ ಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು  ಮದ್ದೂರು ತಾಲೂಕು ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆಂದು ಬಿ.ಇ.ಓ ಧನಂಜಯ ತಿಳಿಸಿದರು.

2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಟ್ಟಣದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸಿ.ಪುನೀತ 625ಕ್ಕೆ 624 ಅಂಕಗಳನ್ನು ಪಡೆದಿದ್ದರು.

ಸಮಾಜ ವಿಜ್ಞಾನದ ವಿಷಯದಲ್ಲಿ 99 ಅಂಕ ಪಡೆದಿದ್ದ ಸಿ.ಪುನೀತ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 1 ಅಂಕವನ್ನು ಪಡೆಯುವ ಮೂಲಕ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಜಿಲ್ಲೆಗೆ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಅಭಿನಂದನೆ

ಅತಿ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಸಿ.ಪುನೀತರವರನ್ನು ಬಿ.ಇ.ಓ ಧನಂಜಯ ಅವರು ಅಭಿನಂದಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಭಯ ಮತ್ತು ಆತಂಕವನ್ನು ಬದಿಗೊತ್ತಿ ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿದರೆ ಉನ್ನತ ಮಟ್ಟದ ಸಾಧನೆ ಮಾಡಲು ಪುನೀತರವರೇ ಉದಾಹರಣೆಯಾಗಿದ್ದಾರೆ ಎಂದು ಬಣ್ಣಿಸಿದರು.

ಮುಂದಿನ ವಿದ್ಯಾಭ್ಯಾಸ ಉಜ್ವಲವಾಗಿರಲೆಂದು ಹಾರೈಸಿದರಲ್ಲದೆ ಉನ್ನತ ವ್ಯಾಸಂಗ ಪಡೆದು ತಾವು ವ್ಯಾಸಂಗ ಮಾಡಿದ ಶಾಲೆಗೆ ಮತ್ತು ತಾವು ಹುಟ್ಟಿ ಬೆಳೆದ ಗ್ರಾಮಕ್ಕೆ ಕೀರ್ತಿ ತರುವಂತೆ ಶುಭ ಹಾರೈಸಿದರು.

2020-21ನೇ ಸಾಲಿನಲ್ಲಿ ಇದೇ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಸುಲೇಮಾನ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಪ್ರಸಕ್ತ ಸಾಲಿನಲ್ಲೂ ಪ್ರಥಮ ಸ್ಥಾನ ಪಡೆಯಲು ಶ್ರಮಿಸಿದ ಶಿಕ್ಷಕರಿಗೆ, ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಲಿದ್ದು ಮುಂದಿನ ದಿನಗಳಲ್ಲೂ ಮತ್ತಷ್ಟು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಈಗಿನಿಂದಲೇ ಅಣಿಗೊಳಿಸಬೇಕೆಂದು ಹೇಳಿದರು.

ಈ ವೇಳೆ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಮುಖ್ಯ ಶಿಕ್ಷಕ ಎಚ್.ಆರ್.ಅನಂತೇಗೌಡ, ವಿ.ಸಿ.ಓ ಲೋಕೇಶ್ ಹಾಗೂ ಶಿಕ್ಷಕರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ