Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಬೆಳೆಗಾರರನ್ನು ಪ್ರೋತ್ಸಾಹಿಸಲು ಮಾವು ಮೇಳ ; ಡಾ.ಕುಮಾರ

ಕೃಷಿ ಪ್ರಧಾನ ಜಿಲ್ಲೆಯೆಂಬ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯುತ್ತಿದ್ದು, ಮಾವು ಬೆಳೆಗಾರ ರೈತರನ್ನು ಪ್ರೋತ್ಸಾಹಿಸಲು ಹಾಗೂ ಮಾರುಕಟ್ಟೆ ಕಲ್ಪಿಸಲು ಮಾವು ಮತ್ತು ಹಲಸಿನ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ತೋಟಗಾರಿಕೆ ಇಲಾಖೆಯ ಸಮೀಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ “ಮಾವು ಮತ್ತು ಹಲಸು ಮೇಳ ಮತ್ತು ಸಸ್ಯ ಸಂತೆ ಪ್ರದರ್ಶನ ಮತ್ತು ಮಾರಾಟ ಮೇಳ-2025” ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತೋಟಗಾರಿಕೆ ಬೆಳೆಗಳಲ್ಲಿ ಮಾವು ಪ್ರಮುಖ ಬೆಳೆಯಾಗಿದ್ದು, ಜಿಲ್ಲೆಯಲ್ಲಿ ವಾರ್ಷಿಕ 20 ಸಾವಿರ ಟನ್ ಮಾವಿನ ಹಣ್ಣು ಉತ್ಪಾದನೆಯಾಗುತ್ತಿದೆ ಎಂದರು.

ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಜೊತೆಗೆ ರೈತರು ಮತ್ತು ಗ್ರಾಹಕರ ನಡುವೆ ವ್ಯವಹಾರಿಕ ಸಂಬಂಧ ವೃದ್ದಿಸುವ ಮೂಲಕ ಬೆಳೆಗಾರರಿಗೆ ಉತ್ತೇಜನ ನೀಡಲು ಈ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವೈವಿಧ್ಯಮಯ ಮಾವು ತಳಿಗಳ ಪ್ರದರ್ಶನ

ಸಕ್ಕರೆ ನಗರದಲ್ಲಿ ಆಯೋಜಿಸಿರುವ ಮಾವು ಮೇಳದಲ್ಲಿ ರಾಜ್ಯದ ನಾನಾ ಜಿಲ್ಲೆಗಳ ರೈತರು ಬೆಳೆದಿರುವ ಬಾದಾಮಿ, ರಸಪುರಿ, ಮಲ್ಲಿಕಾ, ಮಲಗೋವಾ, ಸೆಂದೂರ, ಕೇಸರ್, ಸಕ್ಕರೆಬುತ್ತಿ, ಇಮಾಮ್ ಪಸಂದ್, ತೋತಾಪುರಿ, ಲಾಂಗ್ರಾ, ರುಮಾನಿ, ಚಿಲಕ್ ರಸ, ಆಮ್ಲೇಟ್, ಮದನಪಲ್ಲಿ ಸೇರಿದಂತೆ 60 ಕ್ಕೂ ಹೆಚ್ಚು ವಿವಿಧ ಮಾವಿನ ತಳಿಗಳನ್ನು ಮೇಳದಲ್ಲಿಡಲಾಗಿದ್ದು, ಗ್ರಾಹಕರ ಮನಸೆಳೆಯುತ್ತಿವೆ.

ಗ್ರಾಹಕರಿಗೆ ರಸಾಯನಿಕ ಮುಕ್ತ ಹಣ್ಣು
ಮಾವಿನ ತೋಟದಲ್ಲಿ ಮಾಗಿದ ನೈಜ್ಯ ಹಣ್ಣುಗಳನ್ನು ಕಿತ್ತು ತಂದು ಯಾವುದೇ ರಸಾಯನಿಕ (ಕಾರ್ಬೈಡ್) ಬಳಸದೇ ಸ್ವಾಭಾವಿಕವಾಗಿ ಹಣ್ಣಾದ ಮಾವಿನ ಫಸಲನ್ನು ಜಿಲ್ಲೆಯ ಗ್ರಾಹಕರಿಗೆ ನೀಡುವ ಸದುದ್ದೇಶದಿಂದ ಹಲವು ವರ್ಷಗಳ ನಂತರ ಜಿಲ್ಲೆಯಲ್ಲಿ ಮಾವು ಮೇಳ ಆಯೋಜಿಸಿದ್ದು, ಇದರ ಸದ್ಬಳಕೆಗೆ ಗ್ರಾಹಕರು ಮುಂದಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಕರೆ ನೀಡಿದರು.

ಸಕ್ಕರೆ ನಗರದಲ್ಲಿ ಆಯೋಜನೆಗೊಂಡಿದ್ದ ಮಾವು ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೈಜ್ಯ ಹಣ್ಣುಗಳನ್ನು ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅನೇಕ ವರ್ಷಗಳ ಬಳಿಕ ಜಿಲ್ಲೆಯಲ್ಲಿ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹಲಸಿನ ಹಣ್ಣಿನ ಪ್ರದರ್ಶನ

ಮೇಳದಲ್ಲಿ 10 ಕ್ಕೂ ಹೆಚ್ಚಿನ ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ಪ್ರದರ್ಶಿಸಲಾಯಿತು, ಗುಬ್ಬಿ ಬಕ್ಕೆ, ಬಕ್ಕೆ, ಚೇಲೂರು ಬಕ್ಕೆ, ಅಜ್ಜಿ ಹಲಸು, ಸಕ್ಕರೆ ಪಟ್ಟಣ ಒನಕೆ, ಗುರುಗಳ ತೋಟ, ಚಂದ್ರ ಹಲಸು ಸೇರಿದಂತೆ ಇನ್ನಿತರ ಹಲಸಿನ ಹಣ್ಣುಗಳನ್ನು ಗ್ರಾಹಕರು ಕಣ್ತುಂಬಿಕೊಂಡರು.

ಸಸ್ಯಗಳ ಪ್ರದರ್ಶನ
ಉತ್ತಮ ಗುಣಮಟ್ಟದ ಕಸಿ/ ಸಸಿಗಳನ್ನು ಇಲಾಖಾ ದರದಲ್ಲಿ ಮಾರಾಟ ಮತ್ತು ಪ್ರದರ್ಶನ ಮಾಡಲಾಯಿತು, ವಿವಿಧ ಬಗೆಯ ಸಸಿಗಳಾದ ನಿಂಬೆ, ಮಾವು, ಸೀಬೆ (ಅಲಹಾಬಾದ್ ಸಫೇದ್), ಸಪೋಟ ( ಕ್ರಿಕೆಟ್ ಬಾಲ್), ನುಗ್ಗೆ (PKM1), ಅಡಿಕೆ ಸೇರಿದಂತೆ ಇನ್ನಿತರ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ಮಾವು ಮೇಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ