ಬೇಸಿಗೆ ಶಿಬಿರಗಳಿಂದ ಮಕ್ಕಳ ಯೋಚನಾ ಸಾಮರ್ಥ್ಯ ಮತ್ತು ಕಲಿಕೆಯ ಸಾಮರ್ಥ್ಯ ಹೆಚ್ಚಳವಾಗುತ್ತದೆ, ಇಂತಹ ವಿಭಿನ್ನ ವಿಶೇಷ ಪ್ರಯತ್ನವನ್ನು ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಹಾಗೂ ವಿದ್ಯಾರ್ಥಿ ಸಂಘಟನೆ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಮಾಡುತ್ತಿರುವುದು ಬಹಳ ಖುಷಿಯ ಸಂಗತಿ ಎಂದು ಆಪ್ತ ಸಮಾಲೋಚಕರಾದ ಪದ್ಮರೇಖಾ ತಿಳಿಸಿದರು.
ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಹಾಗೂ ವಿದ್ಯಾರ್ಥಿ ಸಂಘಟನೆ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಮತ್ತು ಕಾಳಪ್ಪ ಬಡಾವಣೆಯ ಸಹಯೋಗದಲ್ಲಿ ಮಂಡ್ಯದ ಬಾಲಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಚಿಣ್ಣರ ಚಿಲಿಪಿಲಿ ಬೇಸಿಗೆ ಶಿಬಿರದ ಸಮಾರೋಪ ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಾಸಾದ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸದ ಮಾರ್ಗದರ್ಶನ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಕಲಿಕೆಯ ಆಸಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಮಾಡಿಕೊಳ್ಳಬೇಕಾದ ಸಿದ್ದತೆಗಳು, ಮಕ್ಕಳ ವಿಚಾರದಲ್ಲಿ ಪೋಷಕರು ನಿಭಾಯಿಸಬೇಕಾದ ಜವಾಬ್ದಾಗಳು ಎಲ್ಲವನ್ನೂ ತಿಳಿಸಿಕೊಡುವ ಜೊತೆಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸಾದ ಮಕ್ಕಳು ಸೇರಲು ಇರುವ ಹಲವು ಬಗೆಯ ಕೋರ್ಸ್ ಗಳ ಬಗೆಯು ಮಾಹಿತಿ ನೀಡಿದರು.

ಸಮಾಜದ ಒಳಿತು ಕೆಡುಕುಗಳ ಬಗ್ಗೆ ಮತ್ತು ತಮ್ನ ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಜಾಗೃತರಾಗಿಸುವ ಕೆಲಸವನ್ನು ಸದಾಮಾಡುತ್ತಾ ಬರುತ್ತಿದೆ, ಇವರ ಜೊತೆಗೆ ಸದಾ ನಮ್ಮ ಸಹಕಾರವು ಇರುತ್ತದೆ, ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಜೊತೆಯಾಗಿ ಶ್ರಮಿಸೋಣ ಎಂದು ತಿಳಿಸಿದರು.
ಪ್ರಾಸ್ತಾವಿನ ಮಾತುಗಳನ್ನಾಡಿದ ಅಂಜಲಿ, ಶಾಲೆಗಳಿಗೆ ರಜೆ ಘೋಷಣೆ ಮಾಡಿದಾಗಿಂದ ಮತ್ತೆ ಶಾಲೆ ಪ್ರಾರಂಭವಾಗುವ ತನಕ ಪೋಷಕರಿಗೆ ಮಕ್ಕಳನ್ನು ನಿಭಾಯಿಸಲು ಮತ್ತು ಉತ್ತಮ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಲು ಸಾಧ್ಯವಿಲ್ಲ, ಇದರಿಂದಾಗಿ ಮಕ್ಕಳಿಗೆ ಮೊಬೈಲ್ ಕೊಟ್ಟೊ ಅಥವಾ ಟಿ ವಿ, ಮುಂದೆಯೋ ಕಾಲ ಕಳೆಯಲು ಬಿಡುತ್ತಾರೆ. ಆದರೆ ಇಂತಹ ಬೇಸಿಗೆ ಶಿಬಿರದಿಂದ ಮಕ್ಕಳು ಮೊಬೈಲ್ ಮತ್ತು ಟಿವಿ ಗೀಳಿಗೆ ಬೀಳದಂತೆ ತಡೆಯಬಹುದು ಎಂದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡವರಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಉತ್ತೀರ್ಣರಾದ ಶ್ರಮಿಕ ನಗರಗಳ ಮಕ್ಕಳಿಗೆ ಅಂಭಿನಂದನಾ ಪತ್ರ ನೀಡಿ, ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ವಕೀಲರಾದ ಬಿ.ಟಿ.ವಿಶ್ವನಾಥ್, ಹಿರಿಯ ಸಾಹಿತಿ ಜಿ.ಟಿ ವೀರಪ್ಪ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಸಿದ್ದರಾಜು, ಮಹಿಳಾ ಮುನ್ನಡೆಯ ಶಿಲ್ಪ, ಪಂಕಜ, ಶೈಲಜಾ, ಜಾಗೃತ ಕರ್ನಾಟಕದ ನಾಗೇಶ್ ಮತ್ತು ಸುಬ್ರಹ್ಮಣ್ಯ, ಅರುಣೋದಯ ಕಲಾತಂಡದ ಮಂಜುಳಾ, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್, ನುಡಿ ಕರ್ನಾಟಕದ ಸಹ ಸಂಪಾದಕ ಸಂತೋಷ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.




