ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಚಿತ್ರ ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಮಂಡ್ಯನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಕಮಲ್ ಹಾಸನ್ ಅವರ ಸುಳ್ಳು ಮತ್ತು ಆಧಾರರಹಿತ ಹೇಳಿಕೆಯು ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕನ್ನಡಿಗರಿಂದ ತೀವು ಖಂಡನೆ ಮತ್ತು ವಿರೋಧ ವ್ಯಕ್ತವಾದರೂ, ಕಮಲ್ ಹಾಸನ್ ಅವರು ಕ್ಷಮೆಯಾಚಿಸದೆ ತಮ್ಮ ಹೇಳಿಕೆಗೆ ಬದ್ಧರಾಗಿರುವುದು ಕನ್ನಡಿಗರ ಆಕ್ರೋಶವನ್ನು ಮತ್ತು ಹೆಚ್ಚಿಸಿದೆ ಎಂದು ಕಿಡಿಕಾರಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು, ಕಮಲ್ ಹಾಸನ್ ಅವರ ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಅವರ ಹೊಸ ಚಿತ್ರ “ತಗ ಲೈಫ್” ಜೂನ್ 5ರಂದು ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆಯಬೇಕೆಂದು ಆಗ್ರಹಿಸಿದರು. ಈ ಚಿತ್ರದ ವಿತರಕರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ, ಆದರೆ ಕರ್ನಾಟಕದಲ್ಲಿ ಈ ಚಿತ್ರದ ಬಿಡುಗಡೆಗೆ ಯಾವುದೇ ಸಹಕಾರ ನೀಡಬಾರದೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಮಿತಿ ಸದಸ್ಯರಾದ .ಮ.ಸೋ.ಚಿದಂಬರ್, ಜಿಲ್ಲಾ ಗೌರವಧ್ಯಕ್ಷ ಶಂಕರೇಗೌಡ, ಜಿಲ್ಲಾ ಅಧ್ಯಕ್ಷ. ಡಿ.ಎಸ್.ವೇಣು, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಸುಜಾತ ಕೃಷ್ಣ, ಮಹಿಳಾ ಅಧ್ಯಕ್ಷೆ ಭಾರತೀಕುಮಾರ್, ತೇಜುಕುಮಾರ್, ಶ್ರೀನಿವಾಸ್, ರಾಮಚಂದ್ರ, ಅಪ್ಪೇಗೌಡ ಹಾಗೂ ಪ್ರಭು ಮತ್ತಿತರರು.




