Tuesday, November 24, 2026

ಪ್ರಾಯೋಗಿಕ ಆವೃತ್ತಿ

ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಬಾಲಕಿ ಸಾವು | ಮಿಮ್ಸ್ ವೈದ್ಯರ ವಿರುದ್ದ ಆಕ್ರೋಶ – ಪ್ರತಿಭಟನೆ

ಮಂಡ್ಯ ಜಿಲ್ಲಾಸ್ಪತ್ರೆ(ಮಿಮ್ಸ್‌) ಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದ ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಮಿಮ್ಸ್ ಎದುರು ಸಿಐಟಿಯು, ಡಿಎಸ್‌ಎಸ್‌, ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತ ಸಂಘ, ಸಿಪಿಐ(ಎಂ), ನಾವು ದ್ರಾವಿಡ ಕನ್ನಡಿಗ ಸಂಘ ಹಾಗೂ ಕನ್ನಡ ಸೇನೆ ಸಂಘಟನೆ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಮೃತ ಬಾಲಕಿಯ ಕುಟುಂಬಸ್ಥರೊಡನೆ ವಿವಿಧ ಸಂಘಟನೆಯ ಮುಖಂಡರು ಮಿಮ್ಸ್‌ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಜಮಾವಣೆಗೊಂಡು ವೈದ್ಯರು ಹಾಗೂ ಮಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ದರ್ಶನ್‌ ವಿರುದ್ಧವು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಳವಳ್ಳಿ ತಾಲ್ಲೂಕಿನ ನೆಲ್ಲೂರು ಗ್ರಾಮದ ಸಾನ್ವಿ (7) ಮೃತ ಬಾಲಕಿ. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಸಾವಿಗೆ ಕಾರಣವಾಗಿದ್ದು, ಇವರಿಗೆ ತಕ್ಕ ಶಿಕ್ಷೆ ಆಗಬೇಕು. ಟೈಲ್ಸ್‌ ಬಿದ್ದು ಸಾನ್ವಿಯ ಪಾದದ ಮೂಳೆ ಮುರಿದಿತ್ತು. ತಂದೆ ನಿಂಗರಾಜು ಮೇ 29 ರಂದು ಮಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದರು. ಎಲ್ಲಾ ಪರೀಕ್ಷೆಯನ್ನು ನಡೆಸಿದ ವೈದ್ಯರು ಅಂದು ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ಮಾಡಿ ನಂತರ ವಾರ್ಡ್‌ಗೆ ಸ್ಥಳಾಂತರಿಸಿದ್ದರು. ಮೇ 30 ರಂದು ಬೆಳಿಗ್ಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು.

ಸಾನ್ವಿ ಪ್ರಜ್ಞಾಹೀನ ಸ್ಥಿತಿ ತಲುಪಿದಳು

ಮೇ 31 ರಂದು ಬೆಳಿಗ್ಗೆ ಡ್ರಿಪ್ ಮೂಲಕ ಬಾಲಕಿಗೆ ಔಷಧ ನೀಡುತ್ತಿದ್ದಂತೆ ಬಾಲಕಿ ಸಾನ್ವಿ ಪ್ರಜ್ಞಾಹೀನ ಸ್ಥಿತಿ ತಲುಪಿದಳು. ರಾತ್ರಿ 10.30 ರ ವೇಳೆಗೆ ಬಾಲಕಿಯ ಸಾವಿನ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದರು. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಬಾಲಕಿ ಸಾವಿಗೆ ಕಾರಣ, ವೈದ್ಯರ ನಿರ್ಲಕ್ಷ್ಯದಿಂದ ಸಾನ್ವಿ ಸಾವನ್ನಪ್ಪಿದ್ದಾಳೆ. ನಮಗೆ ಮಾಹಿತಿ ನೀಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿರುವುದನ್ನು ನೋಡಿದರೆ ವೈದ್ಯರು ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಡಾ.ದರ್ಶನ್‌ ವಿರುದ್ಧ ಆಕ್ರೋಶ

ಚಿಕಿತ್ಸೆ ನೀಡಿದ ಮಿಮ್ಸ್‌ ಆಸ್ಪತ್ರೆ ವೈದ್ಯ ಡಾ.ದರ್ಶನ್ ಅವರು, ಬಾಲಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿಲ್ಲ. ಅಂಗಾಂಗ ವೈಫಲ್ಯದಿಂದಲೇ ಆಕೆ ಸಾವನ್ನಪ್ಪಿದ್ದಾಳೆ. ಬೇಕಾದರೆ ಎಲ್ಲಿ ಬೇಕಾದರೂ ಮರಣೋತ್ತರ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರೂ ಪ್ರತಿಭಟನಾಗಾರರು ಡಾ.ದರ್ಶನ್‌ ಅವರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಸುಳ್ಳು ದಾಖಲೆ ಸೃಷ್ಟಿ

ಬಾಲಕಿಗೆ ಅಂಗಾಂಗ ವೈಲ್ಯವಿತ್ತು ಎಂದು ವೈದ್ಯರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಅಂಗಾಂಗ ವೈಲ್ಯವಿರುವುದಾಗಿ ಸಹಿ ಮಾಡುವಂತೆ ವೈದ್ಯರು ಒತ್ತಾಯಿಸಿದರು, ಇಲ್ಲವಾದರೆ ಮೃತದೇಹ ನೀಡಲ್ಲ ಎಂದು ಧಮ್ಕಿ ಹಾಕಿದರು ಎಂದು ತಂದೆ ನಿಂಗರಾಜು ಗಂಭೀರ ಆರೋಪ ಮಾಡಿದರು.

ಎಫ್‌ಐಆರ್‌ ದಾಖಲು

ವಿಷಯ ಗಂಭೀರತೆ ಪಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ದೌಡಾಯಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರತಿಭಟನಾಕಾರರನ್ನು ಮನವೊಲಿಸಿದರು. ಶವ ಪರೀಕ್ಷೆಗೆ ಮೈಸೂರಿಗೆ ಕಳುಹಿಸಿದರು, ವೈದ್ಯರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡರು, ನಂತರ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಸಿ.ಕುಮಾರಿ, ಎಂ.ವಿ.ಕೃಷ್ಣ, ಎನ್‌.ಎಲ್‌.ಭರತ್‌ರಾಜ್‌, ಬಿ.ಹನುಮೇಶ್‌, ಚಂದ್ರಶೇಖರ್‌, ಆರ್‌.ರಾಜು, ನರಸಿಂಹಮೂರ್ತಿ, ಅಭಿಗೌಡ, ಮಂಜುನಾಥ್‌, ಸುಶೀಲಾ, ಲಕ್ಷ್ಮಿ, ಡಿ.ಕೆ.ಲತಾ, ಮಹದೇವಮ್ಮ, ಪುಟ್ಟಮ್ಮ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ