ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ 63 ನೇ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಲವು ಅರ್ಥಪೂರ್ಣ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಭಾನುವಾರ ಸಂಭ್ರಮದಿಂದ ಆಚರಿಸಿದರು.
ಮಂಡ್ಯನಗರದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಂಬದಹಳ್ಳಿ ಪುಟ್ಟಸ್ವಾಮಿ, ಹಾಲಹಳ್ಳಿ ಅಶೋಕ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಿಮ್ಸ್ ಆವರಣದ ಮಮತೆಯ ಮಡಿಲುನಲ್ಲಿ ರೋಗಿಗಳಿಗೆ ಮತ್ತು ಅವಲಂಭಿತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ, ಮಿಮ್ಸ್ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸೇವಾಕಿರಣ ವೃದ್ಧಾಶ್ರಮದ ವೃದ್ದರಿಗೆ ಮಡಿವಾಳ ಸಮಾಜದ ಕಾಂಗ್ರೆಸ್ ಮುಖಂಡ ಹಳುವಾಡಿ ವೆಂಕಟೇಶ್ ನೇತೃತ್ವದಲ್ಲಿ ಬೆಡ್ ಶೀಟ್ ವಿತರಣೆ ಮಾಡಲಾಯಿತು.

ಕಾಂಗ್ರೆಸ್ ಮುಖಂಡ ಶಿವನಂಜು ಅವರು ಪ್ರೇರಣಾ ಅಂಧರ ಶಾಲೆಯ ಮಕ್ಕಳಿಗೆ ಬೆಳಗಿನ ಉಪಹಾರ ವಿತರಿಸಿದರು. ಕಳೆದ 30 ವರ್ಷಗಳಿಂದ ವಿದ್ಯಾನಗರದ ವಿದ್ಯಾಗಣಪತಿ ದೇವಾಲಯದಲ್ಲಿ ಚಲುವರಾಯಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಮಾಜಿ ಶಾಸಕ ಹೆಚ್.ಬಿ.ರಾಮು ಮಾತನಾಡಿ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಪೂಜ್ಯ ಕೆ.ವಿ.ಶಂಕರಗೌಡ, ಹೆಚ್.ಕೆ. ವೀರಣ್ಣಗೌಡ,ಜಿ.ಮಾದೇಗೌಡ, ಎಸ್.ಎಂ.ಕೃಷ್ಣರವರ ನಂತರ ನಾಯಕತ್ವದಲ್ಲಿ ಅದೇ ಹಾದಿಯಲ್ಲಿ ಬೆಳೆದು ಬಂದು ಎಸ್.ಡಿ. ಜಯರಾಮ್ ಗರಡಿಯಲ್ಲಿ ಹೆಚ್ಚಿನ ನಾಯಕತ್ವ ರೂಪಿಸಿಕೊಂಡು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾಗುವ ಮೂಲಕ ಗ್ರಾಮೀಣ ಪ್ರದೇಶದ ಕೆಳಹಂತದ ಜನರಿಗೆ ನಾಯಕತ್ವ ಕೊಟ್ಟವರು ಎಂದು ಹೇಳಿದರು.
ಆರೋಗ್ಯ ಸಚಿವರಾಗಿದ್ದಾಗ ಮಂಡ್ಯಕ್ಕೆ ಮೆಡಿಕಲ್ ಕಾಲೇಜ್ ತಂದವರು.ಕೃಷಿ ಮಂತ್ರಿಯಾಗಿ ಕೃಷಿ ವಿಶ್ವವಿದ್ಯಾಲಯ ತಂದು, ನೆನಗುದಿಗೆ ಬಿದ್ದಿದ್ದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಮೂಲಕ
ಸಕ್ಕರೆ ಕಾರ್ಖಾನೆ ನೆಡೆಯುವ ವಾತಾವರಣ ನಿರ್ಮಾಣ ಮಾಡಿದ್ದಾರೆ.ಜಿಲ್ಲೆ ಸಮಗ್ರವಾದ ಅಭಿವೃದ್ಧಿಯತ್ತ ಸಾಗುವ ನಿಟ್ಟಿನಲ್ಲಿ ಅವರ ನಾಯಕತ್ವ ನಿಲ್ಲಲಿ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಅವಶ್ಯಕತೆ ಇರುವ ನಾಯಕತ್ವ ಇರುವ ಗುಣ ಸಚಿವ ಚಲುವರಾಯ ಸ್ವಾಮಿ ಅವರದು ಎಂದು ತಿಳಿಸಿದರು. ಕೃಷಿ ಸಚಿವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯವನ್ನು ದೇವರು ಕರುಣಿಸಲಿ ಇನ್ನೂ ಹೆಚ್ಚಿನ ಅಧಿಕಾರ ಸಿಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ನೀಲಾಮೂರ್ತಿ, ವಿಜಯಲಕ್ಷ್ಮಿ ರಘುನಂದನ್, ಬೇಲೂರು ಸೋಮಶೇಖರ್, ಕೆರಗೋಡು ಸೋಮಶೇಖರ್, ಅಭಿಲಾಶ್,ಅಪ್ಪಾಜಿಗೌಡ, ಶ್ರೀಧರ್, ನವೀನ್, ಶಂಕರಲಿಂಗೇಗೌಡ, ದೀಪಕ್, ಶಿವನಂಜು,ಸುಂಡಹಳ್ಳಿ ಮಂಜುನಾಥ್, ಎಂ.ಎಸ್. ಚಿದಂಬರ್, ಸಿ.ಎಂ.ದ್ಯಾವಪ್ಪ, ಕೃಷ್ಣ,ನಾಗೇಶ್, ಸೋಮಶೇಖರ್ ಸೇರಿದಂತೆ ಇನ್ನಿತರರಿದ್ದರು.




