ನಾಡು ಕಂಡ ಅಪರೂಪದ ಭಾವಗೀತೆಗಳ ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಬರೆದಂತೆ ಬದುಕಿದವರು, ಅವರ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳನ್ನೇ ಕಾಣಬಹುದಾಗಿದೆ ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ. ಹನುಮಂತು ಅಭಿಪ್ರಾಯಪಟ್ಟರು.
ಮಂಡ್ಯ ನಗರದಲ್ಲಿ ಸೇವಾಕಿರಣ ಸಭಾಂಗಣದಲ್ಲಿ ಭಾನುವಾರ ಅಸೋಸಿಯೇಷನ್ ಆಫ್ ಆಲಯನ್ಸ್ ಸಂಸ್ಥೆ ಇಂಟರ್ನ್ಯಾಷನಲ್ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಮಂಡ್ಯ ವತಿಯಿಂದ ಆಯೋಜಿಸಿದ್ದ ಖ್ಯಾತ ಸಾಹಿತಿ ದಿ. ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಭಾವಪೂರ್ಣ ಶ್ರದ್ದಾಂಜಲಿ-ನುಡಿನಮನ ಗೀತನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರಕ್ಕೆ ವೆಂಕಟೇಶಮೂರ್ತಿಯವರ ಕೊಡುಗೆ ಅಪಾರ ಹಾಗೂ ಅವರ ಸಾಹಿತ್ಯಗಳು ಚಿರನೂತನ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಂತಿದ್ದ ಹೆಚ್ ಎಸ್ ವೆಂಕಟೇಶ ಮೂರ್ತಿ ಅವರ ಅಗಲಿಕೆ ಸಾರಸತ್ವಲೋಕಕ್ಕೆ ತುಂಬಲಾರದ ನಷ್ಠವಾಗಿದೆ ಎಂದು ವಿಷಾದಿಸಿದರು.
ಸೇವಾಕಿರಣ ವೃದ್ದಾಶ್ರಮ ಕಾರ್ಯದರ್ಶಿ ಜಿ.ವಿ.ನಾಗರಾಜು, ಕವಿ ಹೆಚ್.ಎಸ್.ವಿ. ಅವರ ಉಸಿರು ನಿಂತಿರಬಹುದು ಆದರೆ ಭಾವಗೀತೆಗಳ ಮೂಲಕ ಅವರ ಹೆಸರು ಅಜರಾಮರವಾಗಿದೆ, ಸಾಹಿತ್ಯ-ಸಂಗೀತ ಲೋಕ ಸದಾ ಸ್ಮರಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಜಿ.ಧನಂಜಯ ದರಸಗುಪ್ಪೆ, ಕವಿತೆಯಿಂದ ಪ್ರಾರಂಭವಾದ ಸಾಹಿತ್ಯದ ಕೃಷಿ, ಕಥೆ -ಕಾದಂಬರಿ -ನಾಟಕ -ಮಕ್ಕಳ ಸಾಹಿತ್ಯ -ಸಂಪಾದನೆ -ಅನುವಾದ,ಕಿರುತೆರೆ -ಸಿನಿಮಾ ಹಾಗೂ ಮಹಾಕಾವ್ಯದ ವರೆಗೂ ಕೃಷಿ ಮಾಡಿದ ಅಪರೂಪದ ಸಾಹಿತಿಗಳಾಗಿದ್ದರು.
‘ಆಡು ಮುಟ್ಟದ ಸೊಪ್ಪಿಲ್ಲ ‘ದ ರೀತಿ ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ ಎಂದರೆ ತಪ್ಪಾಗಲಾರದು. ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ, ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಲವಾರು ಪ್ರಮುಖ ರಾಜ್ಯ ಪ್ರಶಸ್ತಿಗಳು ದೊರೆತರೂ, ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ದೊರೆತರೂ ಎಂದು ಹಮ್ಮು -ಬಿಮ್ಮು ತೋರಿದವರಲ್ಲ ಎಂದು ಸ್ಮರಿಸಿದರು.
ಸ್ವತಃ ಹಾಡುಗಾರ -ಸಂಭಾಷಣೆಗಾರ -ನಟ -ನಿರ್ದೇಶಕರರಾಗಿದ್ದು ಹೆಮ್ಮೆಯ ವಿಷಯ, ಅವರು ರಚಿಸಿದ ಭಾವಗೀತೆ- ಶೀರ್ಷಿಕೆ ಗೀತೆ -ಚಿತ್ರಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳೀಯದೇ ಶಾಶ್ವತವಾಗಿ ಉಳಿದಿರುವುದನ್ನು ಸ್ಮರಿಸಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೆಚ್. ಎಸ್. ವೆಂಕಟೇಶಮೂರ್ತಿಯವರ ಜನಪ್ರಿಯ ಭಾವಗೀತೆ-ಚಿತ್ರಗೀತೆಗಳನ್ನು ಪ್ರತಿಭಾಂಜಲಿ ಡೇವಿಡ್ ಹಾಡಿದರು. ಹೆಚ್.ಎಸ್.ವೆಂಕಟೇಶಮೂರ್ತಿಯವರ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಚಿನ್ನಾರಿ ಮುತ್ತ, ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆಲ್ಲ ಒಂದು ಹೆಣ್ಣು,ಜನಪ್ರಿಯ ಭಾವ ಗೀತೆ-ಚಿತ್ರಗೀತೆ ಗಳನ್ನು ಹಾಡಿದರು.
ಪ್ರತಿಭಾಂಜಲಿ ಡೇವಿಡ್ ಮಾತನಾಡಿ, ಮಂಡ್ಯದ ಜೊತೆಗೆ ಹೆಚ್ಎಸ್ವಿ ಅವರಿಗೆ ಇದ್ದ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಕಲ್ಲಹಳ್ಳಿ ನಾಗೇಂದ್ರ, ಚಂದ್ರಶೇಖರ, ಅವಿನಾಶ್, ನಾಗರಾಜು, ಲೋಕೇಶ್, ಶಿಕ್ಷಕ ಬಲ್ಲೇನಹಳ್ಳಿ ಮಂಜುನಾಥ್, ಶಿವು, ಮಲ್ಲೇಶ್ ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.




