ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀಯ ಕಬಳಿಸಿ ಕಾರ್ಪೋರೇಟ್ ವಲಯಕ್ಕೆ ಅನುಕೂಲ ಮಾಡಿಕೊಡುವ ಖಂಡಿಸಿ ಹೋರಾಟ ಮಾಡಿ ನಮ್ಮ ಹಕ್ಕು ಪ್ರತಿಪಾದಿಸಬೇಕು’ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನೂರ್ ಶ್ರೀಧರ್ ಕರೆ ನೀಡಿದರು.
ಮಂಡ್ಯ ಕಲಾಮಂದಿರದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಹಯೋಗದಲ್ಲಿ ಮೇ ದಿನ ಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ಗಳ ಜಾರಿ ವಿರೋಧ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ ದೇವನಹಳ್ಳಿಯಲ್ಲಿ ರೈತರ ಸಾವಿರ ಎಕರೆಗೂ ಹೆಚ್ಚು ಮೀನು ಸ್ವಾಧೀನ ಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ರೂಪಿಸಬೇಕು. ಈ ಹೋರಾಟಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮಂಡ್ಯದ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮೊದಲ ಹೋರಾಟದ ಭಾಗವಾಗಿ ರೈತ ಚಳವಳಿಗೆ ಜೀವ ತುಂಬುವ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.

‘ಕೇಂದ್ರ, ರಾಜ್ಯ ಸರ್ಕಾರಗಳೆರಡೂ ರಾಜ್ಯ ದುಡಿಯುವ ಜನರ ಬದುಕನ್ನು ಛಿದ್ರಗೊಳಿಸುವ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸುವ ಸಾಲು ಸಾಲು ಕಾಯಿದೆಗಳನ್ನು ತರಲು ಹೊರಟವೆ. ದುಡಿಯುವ ಜನರ ಮೇಲೆ ನಡೆಯಲಿರುವ ಈ ಪ್ರಹಾರವನ್ನು ವಿರೋಧಿಸಬೇಕು. ಕೆಲಸದ ಅವಧಿ 8ರಿಂದ 12 ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು’ ಆಗ್ರಹಿಸಿದರು.
ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ‘ಚಿಂದಿ ಹಾಯುವುದರಿಂದ ಹಿಡಿದು ಸುಣ್ಣಬಣ್ಣ ಬಳಿಯುವ ದುಡಿಯುವ ಕಾರ್ಮಿಕ ವರ್ಗಕ್ಕೆ ಕನಿಷ್ಠ ಕೂಲಿ ₹33 ಸಾವಿರ ನೀಡಬೇಕು. ಉಚಿತ ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ನೀರು ಮತ್ತು ನೈರ್ಮಲ್ಯದ ಹಕ್ಕು ಹಾಗೂ ಎಲ್ಲರಿಗೂ ವಸತಿ ಖಾತ್ರಿಪಡಿಸಬೇಕು. ನೂತನ ಶಿಕ್ಷಣ ನೀತಿಯನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಶ್ರಮಿಕ ಶಕ್ತಿಯ ರಾಜ್ಯ ಘಟಕದ ಅಧ್ಯಕ್ಷ ವರದರಾಜೇಂದ್ರ, ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯದರ್ಶಿಗಳಾದ ಪೂರ್ಣಿಮಾ, ಸತೀಶ್ ಅರವಿಂದ್, ಮುಖಂಡರಾದ ಚೆನ್ನಮ್ಮ, ರವಿ ಹಾಗೂ ಮೋಹನ್ ಭಾಗವಹಿಸಿದ್ದರು.




