ಪ್ರಸಕ್ತ ವರ್ಷ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಿಸುವ ಗುರಿಯನ್ನು ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಪ್ರಕಟಿಸಿದೆ. ಪ್ರಸ್ತುತ ಅಪೆಕ್ಸ್ ಬ್ಯಾಂಕ್ ನಬಾರ್ಡ್ ನಿಗದಿ ಮಾಡಿದ್ದಕ್ಕಿಂತ ಹೆಚ್ಚುವರಿ ಸಾಲ ಪಡೆಯಬೇಕೆಂದು ಇದ್ದರೆ ಹೆಚ್ಚುವರಿ 4 ಪರ್ಸೆಂಟ್ ಬಡ್ಡಿ ಭರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್’ಗೆ ಹೆಚ್ಚುವರಿಯಾಗುವ ಬಡ್ಡಿ ಹೊರೆಯನ್ನು ರಾಜ್ಯ ಸರ್ಕಾರ ಭರಿಸಬೇಕು, ಈ ಮೂಲಕ ರಾಜ್ಯದ ರೈತರಿಗೆ ಅನೂಕೂಲ ಮಾಡಿಕೊಂಡಬೇಕೆಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಪತ್ರ ಬರೆದಿರುವ ಅವರು, ಈಗಾಗಲೇ ಮುಂಗಾರು ಹಂಗಾಮು ರಾಜ್ಯದಲ್ಲಿ ಶುರುವಾಗಿದ್ದು ಕೃಷಿ ಚಟುವಟಿಕೆಯು ಚುರುಕು ಪಡೆದುಕೊಂಡಿವೆ. ರಾಜ್ಯದಲ್ಲಿ ರೈತರಿಗೆ ಅಗತ್ಯವಿರುವ ಬೀಜ ಹಾಗೂ ಗೊಬ್ಬರಗಳನ್ನು ವಿತರಿಸಲು ಕೃಷಿ ಇಲಾಖೆ ತಯಾರಿ ನಡೆಸಿದೆ. ಕೃಷಿ ಇಲಾಖೆ ತನ್ನ ಬಿತ್ತನೆಯ ಗುರಿ ಮುಟ್ಟಬೇಕು ಎಂದರೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಕಾಲದಲ್ಲಿ ಅಗತ್ಯವಿದ್ದಷ್ಟು ಸಾಲ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದು ತಿಳಿಸಿದ್ದಾರೆ.
ರೈತರ ಜೊತೆ ಸಹಕಾರ ವಲಯವೂ ಸದೃಢ
ಪ್ರತಿ ವರ್ಷ ನಬಾರ್ಡ್ ರಾಜ್ಯ ಅಪೆಕ್ಸ್ ಬ್ಯಾಂಕ್ ಮೂಲಕ ಡಿಸಿಸಿ ಬ್ಯಾಂಕ್ಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತದೆ. ಡಿಸಿಸಿ ಬ್ಯಾಂಕ್ಗಳು ತಮ್ಮ ವ್ಯಾಪ್ತಿಯ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಒದಗಿಸುತ್ತವೆ. ಪರಿಣಾಮವಾಗಿ ರೈತರು ಹೆಚ್ಚಿನ ಸಾಲದ ಹೊರೆ ಇಲ್ಲದೇ ಆಹಾರ ಧಾನ್ಯಗಳನ್ನು ಬೆಳೆದು ಅವರ ಜೀವನ ಮಟ್ಟ ಸುಧಾರಿಸಿಕೊಳ್ಳುವ ಜತೆಗೆ ನಮ್ಮ ಜನರ ಹೊಟ್ಟೆ ತುಂಬಿಸುತ್ತಾರೆ. ಈ ವ್ಯವಸ್ಥೆಯಿಂದ ರೈತರ ಜತೆಗೆ ರಾಜ್ಯ ಸಹಕಾರ ವ್ಯವಸ್ಥೆಯೂ ಸದೃಢವಾಗಿ ಬೆಳೆದಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ನೀಡುವ ಗುರಿ
ಈ ವರ್ಷ ಎಂದರೆ 2025-26 ನೇ ಸಾಲಿನಲ್ಲಿ 36.31 ಲಕ್ಷ ರೈತರಿಗೆ 25925.80 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ಮತ್ತು 0.69 ಲಕ್ಷ ರೈತರಿಗೆ 2074.20 ಕೋಟಿ ರೂ.ಗಳ ಮಧ್ಯಮಾವಧಿ/ದೀರ್ಘಾವಧಿ ಕೃಷಿ ಸಾಲ ಸೇರಿ ಒಟ್ಟು 37 ಲಕ್ಷ ರೈತರಿಗೆ 28,000 ಕೋಟಿ ರೂ.ಗಳ ಕೃಷಿ ಸಾಲ ವಿತರಿಸಲು ಗುರಿ ನಿಗದಿಪಡಿಸಿದೆ.
ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಬರೆದ ಪತ್ರದಲ್ಲೇನಿದೆ ?
ಕಳೆದ ಸಾಲಿನಲ್ಲಿ ನಬಾರ್ಡ್ ಶೇ.4 ರ ಬಡ್ಡಿ ದರದಲ್ಲಿ 5,450 ಕೋಟಿ ರೂ. ಸಾಲವನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಗೆ ನೀಡಿತ್ತು. ಇದರಿಂದ ಜಿಲ್ಲೆಯ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ಗಳು ರೈತರಿಗೆ ಸಾಲ ಕೊಡಲು ಅನುಕೂಲವಾಗಿತ್ತು. ಆದರೆ, ಈ ಬಾರಿ ನಬಾರ್ಡ್ ಶೇ.4ರ ಬಡ್ಡಿಯಲ್ಲಿ ಅಪೆಕ್ಸ್ ಬ್ಯಾಂಕ್ಗೆ ನೀಡುವ ಸಾಲದ ಪ್ರಮಾಣವನ್ನು 2700 ಕೋಟಿ ರೂ.ಗಳಿಗೆ ಸೀಮಿತಗೊಳಿಸಿದೆ. ಶೇ.4 ರ ಬಡ್ಡಿಯ 2700 ಕೋಟಿ ರೂ. ಸಾಲದ ಹೊರತಾಗಿಯೂ ರಾಜ್ಯಕ್ಕೆ ಅಗತ್ಯವಿದ್ದಷ್ಟು ಹೆಚ್ಚುವರಿ ಸಾಲ ನೀಡಲು ನಬಾರ್ಡ್ ಸಿದ್ಧವಿದ್ದರೂ ಅದಕ್ಕೆ ಶೇ.8.25 ರಷ್ಟು (ಶೇ.4.25 ಹೆಚ್ಚುವರಿ) ಬಡ್ಡಿಯನ್ನು ನೀಡಬೇಕು ಎಂದು ಹೇಳುತ್ತಿದೆ.
ನಬಾರ್ಡ್ ಈ ನಿಯಮಾವಳಿಯಿಂದ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ಗಳಿಗೆ ಮುಂಗಾರು ಹಂಗಾಮಿನ ಸಾಲ ವಿತರಣೆಗೆ ಬಂಡವಾಳದ ಕೊರತೆ ಉಂಟಾಗುವ ಸಾಧ್ಯತೆಯಿದೆ. ಹೆಚ್ಚುವರಿ ಬಡ್ಡಿ ನೀಡಿ ಸಾಲ ಪಡೆಯಲು ಹೋದರೆ ರಾಜ್ಯದ ಅಪೆಕ್ಸ್, ಡಿಸಿಸಿ ಬ್ಯಾಂಕ್ಗಳು ಹಾಗೂ ಆ ಮೂಲಕ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಅಲ್ಲದೇ ಇದರಿಂದ ಅವು ಅಗತ್ಯವಿದ್ದಷ್ಟು ಸಾಲವನ್ನು ರೈತರಿಗೆ ನೀಡಲು ಸಾಧ್ಯವಿಲ್ಲ. ಪರಿಣಾಮ ರಾಜ್ಯ ಈ ಆರ್ಥಿಕ ವರ್ಷದಲ್ಲಿ ಗುರಿ ಇಟ್ಟುಕೊಂಡಷ್ಟು ಆಹಾರ ಧಾನ್ಯ ಉತ್ಪಾದಿಸಲು ಸಾಧ್ಯವಾಗದೇ ಇರುವ ಸಾಧ್ಯತೆ ಇದೆ.
ಹಾಗಾಗಿ ರಾಜ್ಯ ಸರ್ಕಾರ ರಾಜ್ಯ ಅಪೆಕ್ಸ್ ಬ್ಯಾಂಕ್ ಪರವಾಗಿ ನಬಾರ್ಡ್ಗೆ ಶೇ. 4.25 ರಷ್ಟು ಹೆಚ್ಚುವರಿ ಬಡ್ಡಿ ದರವನ್ನು ತುಂಬಿಸಿಕೊಟ್ಟು ಅಪೆಕ್ಸ್ ಬ್ಯಾಂಕ್ ಅಗತ್ಯವಿದ್ದಷ್ಟು ಸಾಲ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ. ಇದರಿಂದ ರಾಜ್ಯದ ಅಪೆಕ್ಸ್, ಡಿಸಿಸಿ ಬ್ಯಾಂಕ್ಗಳು ಹಾಗೂ ಪ್ರಾಥಮಿಕ ಸೊಸೈಟಿಗಳೂ ಸುಸ್ಥಿರವಾಗಿ ವ್ಯವಹಾರ ನಡೆಸಲು ಸಾಧ್ಯವಾಗಲಿದ್ದು, ಆ ಮೂಲಕ ರೈತರಿಗೆ ಅಗತ್ಯ ಸೇವೆ ಒದಗಿಸಲು ಸಾಧ್ಯವಾಗಲಿದೆ.
ನಿಯಮಾವಳಿ ಸಡಿಲಿಸಿ
ಸ್ವಸಹಾಯ ಸಂಘ(ಎಸ್ಎಚ್ಜಿ)ಗಳಿಗೆ 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲು ಅವಕಾಶವಿದೆ. ಆದರೆ, ಶೂನ್ಯ ಬಡ್ಡಿ ಸೌಲಭ್ಯ ಪಡೆಯಲು ಸ್ವಸಹಾಯ ಸಂಘಗಳು ಸಂಬಂಧಪಟ್ಟ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮಾವಳಿ ವಿಧಿಸಲಾಗಿದೆ. ಆದರೆ, ರಾಜ್ಯದ ಹೆಚ್ಚಿನ ಮಹಿಳ ಸ್ವ ಸಹಾಯ ಸಂಘಗಳು ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳದ ಕಾರಣ ಶೂನ್ಯ ಬಡ್ಡಿ ಸೌಲಭ್ಯದಿಂದ ವಂಚಿತವಾಗುತ್ತಿವೆ. ಬಡ್ಡಿ ಕಟ್ಟುತ್ತಿವೆ. ಪೋರ್ಟಲ್ ನೋಂದಣಿಯಲ್ಲಿ ಈ ಕಠಿಣ ನಿಯಮಾವಳಿಗಳು ಇದ್ದು ಅವುಗಳನ್ನು ಸರಳೀಕರಿಸಿ ಎಂದು ರಾಜ್ಯದ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ದಿನೇಶ್ ಗೂಳಿಗೌಡ ಕೋರಿದ್ದಾರೆ.




