ಮಂಡ್ಯ ಜಿಲ್ಲಾ ಪಂಚಾಯತ್ ನ 2025-26ನೇ ಸಾಲಿಗೆ ಜಿಲ್ಲಾ ವಲಯ ಲಿಂಕ್ ಡಾಕ್ಯೂಮೆಂಟ್ ಯೋಜನೆಯಡಿ ಒಟ್ಟು ರೂ.38919.80 ಲಕ್ಷಗಳ ಅನುದಾನವು ನಿಗದಿಯಾಗಿದ್ದು, ಅದರಲ್ಲಿ ವೇತನಕ್ಕೆ ರೂ.18300.78 ಲಕ್ಷ ಹಾಗೂ ವೇತನೇತರಕ್ಕೆ ರೂ.20619.02ಲಕ್ಷಗಳು ನಿಗದಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ತಿಳಿಸಿದರು.
ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿಗೆ ತಯಾರಿಸಲಾದ ಕ್ರಿಯಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನ ರೂ.6.24 ಕೋಟಿ ನಿಗದಿಯಾಗಿದ್ದು, ಮಾರ್ಗಸೂಚಿಯನ್ವಯ ಕ್ರಿಯಾ ಯೋಜನೆಯನ್ನು ತಯಾರಿಸಬೇಕಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಸದರಿ ವರ್ಷದ ಜಿಲ್ಲಾ ವಲಯ ಲಿಂಕ್ ಡಾಕ್ಯೂಮೆಂಟ್ ಅನುದಾನ, ಜಿಲ್ಲಾ ಪಂಚಾಯತ್ ಅನಿರ್ಬಂದಿತ ಅನುದಾನ, ಇಲಾಖಾ ಅನುದಾನದೊಂದಿಗೆ ನರೇಗಾ ಒಗ್ಗೂಡಿಸುವಿಕೆ ಯೋಜನೆ ಅನುಷ್ಟಾನ ಕುರಿತಂತೆ ಚರ್ಚಿಸಲಾಯಿತು.
ಆರೋಗ್ಯ ಇಲಾಖೆ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ಪಶುವೈದ್ಯ ಆಸ್ಪತ್ರೆಗಳು, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್, ಮೀನುಗಾರಿಕೆ ಇಲಾಖೆ, ಇತರೆ ಇಲಾಖೆಗಳಡಿಯಲ್ಲಿ ದುರಸ್ತಿ ಆಗಬೇಕಾದ ಇಲಾಖಾವಾರು ಕಟ್ಟಡ ಕಾಮಗಾರಿಗಳ ಛಾಯಾಚಿತ್ರಗಳ ಪರಿಶೀಲನೆ ಮಾಡಿದರು. ಅನುದಾನ ಮಿತಿಯಲ್ಲಿದ್ದು ದುರಸ್ತಿ ಕಾಮಗಾರಿಗಳು ಹೆಚ್ಚು ಇರುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉಪ ವಿಭಾಗಗಳವರು ಹಾಗೂ ತಾಂತ್ರಿಕ ಸಿಬ್ಬಂದಿಯೊಡನೆ ದುರಸ್ತಿ ಆಗಬೇಕಾಗಿರುವ ಕಟ್ಟಡ ಕಾಮಗಾರಿಗಳ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿಗಳ ಜಿ.ಪಿ.ಎಸ್. ಆಧಾರಿತ ಫೋಟೋ ಹಾಗೂ ವೀಡಿಯೋ ತೆಗೆದು ಅತೀ ಅವಶ್ಯಕತೆ ಇರುವ ಕಾಮಗಾರಿಗಳನ್ನು ಮತ್ತು ಆಯಾ ವರ್ಷದಲ್ಲೇ ಪೂರ್ಣ ಗೊಳ್ಳುವಂತಹ ಕಾಮಗಾರಿಗಳನ್ನು ಆದ್ಯತೆ ಮೇಲೆ ತೆಗೆದುಕೊಂಡು ಹಾಗೂ ಕ್ರಿಯಾ ಯೋಜನೆ ಯಲ್ಲಿರುವ ಕಾಮಗಾರಿಗಳಿಗೆ ರೇಖಾ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕ್ರಿಯಾ ಯೋಜನೆಯನ್ನು ಜೂನ್ 18 ರಂದು ನಡೆಯುವ ಸಭೆಯಲ್ಲಿ ಮಂಡಿಸುವಂತೆ ತಿಳಿಸಿದರು.
ಕೆರೆಗಳ ಸಂರಕ್ಷಣೆ ಬಗ್ಗೆ ಸರ್ಕಾರದ ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದ್ದು ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಬಗ್ಗೆ ಆದ್ಯತೆ ನೀಡುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದವರಿಗೆ ತಿಳಿಸಿದರು.
ಒತ್ತುವರಿ ತೆರವುಗೊಳಿಸಿದ ನಂತರ ಮತ್ತೆ ಒತ್ತುವರಿ ಆಗದಂತೆ ಕೆರೆ ಗಡಿ ಭಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡೆಸುವ ಬಗ್ಗೆ ಪಂ.ರಾ.ಇಂ.ಉಪ ವಿಭಾಗದ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ವಿವೇಕಾ ಯೋಜನೆಯಡಿಯಲ್ಲಿ ಹಿಂದಿನ ಸಾಲಿನಲ್ಲಿ ಯಾವ ಏಜೆನ್ಸಿಗಳಿಗೆ ಶಾಲಾ ಕೊಠಡಿ ನಿರ್ಮಾಣ ಕೆಲಸ ವಹಿಸಲಾಗಿತ್ತು ಎಂಬ ಬಗ್ಗೆ ವರ್ಷವಾರು, ಕಾಮಗಾರಿವಾರು ಪ್ರಗತಿ ವರದಿಯನ್ನು ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆರವರು ಮುಂದಿನ ಸಭೆಯಲ್ಲಿ ಮಾಹಿತಿಯನ್ನು ನೀಡಲು ತಿಳಿಸಿದರು.
ಅನುಷ್ಟಾನ ಏಜೆನ್ಸಿರವರು ಸಹ ತಮಗೆ ವಹಿಸಲಾಗಿದ್ದ ಶಾಲಾ ಕೊಠಡಿ ನಿರ್ಮಾಣ ಬಾಬ್ತು ಕಾಮಗಾರಿವಾರು, ವರ್ಷವಾರು ಪರಿಶೀಲನೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸಹ ತಿಳಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಸಂಬಂಧಿಸಿದಂತೆ ಕಟ್ಟಡ ದುರಸ್ತಿ ಹಾಗೂ ಇತರೆ ಬಾಬ್ತುಗಳಿಗೆ ಸಂಬಂಧಿಸಿದಂತೆ ನಿಗದಿತ ಸಮಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು. ಇದಕ್ಕೂ ಮೊದಲು ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು ಮತ್ತು ನೊಂದಾಯಿತ ಗುತ್ತಿಗೆದಾರರನ್ನು ಕರೆದು ತಾಲ್ಲೂಕುವಾರು ಸಭೆ ನಡೆಸಿ ನಡವಳಿ ಮಾಡಬೇಕು. ಟೆಂಡರ್ ಪ್ರಕ್ರಿಯೆ ವಿಫಲವಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮಯ ಮತ್ತು ಅನುದಾನ ವ್ಯಪಗತವಾಗಿದೆ ಎಂದು ಭಾವಿಸಿ ಶಿಸ್ತು ಕ್ರಮವಹಿಸುವುದಾಗಿ ಎಚ್ಚರಿಕೆ ನೀಡಿದರು.
ಕಟ್ಟಡ ನಿರ್ಮಾಣ ಸಂಬಂಧ ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ಸರಿಯಾದ ದಾಖಲಾತಿ ಪಡೆದು ನಿವೇಶನ ಹಸ್ತಾಂತರಿಸಿಕೊಂಡು ಮುಂದಿನ ಕ್ರಮವಹಿಸಲು ತಿಳಿಸಲಾಯಿತು. ಯಾವುದೇ ಕಾರಣಕ್ಕೂ ಕಾಮಗಾರಿ ಬದಲಾವಣೆಗೆ ಅವಕಾಶ ನೀಡದೆ ಅವಶ್ಯಕತೆ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಕ್ರಿಯಾ ಯೋಜನೆಯಲ್ಲಿ ತೆಗೆದುಕೊಳ್ಳಲು ತಿಳಿಸಿದರು.
ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ನಂತರ ಒಂದು ತಿಂಗಳಲ್ಲಿ ಅನುಷ್ಟಾನ ಏಜೆನ್ಸಿರವರು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ ಮಾಹೆ ಒಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಮತ್ತು ಹಣ ಪಾವತಿ ಮಾತ್ರ ಬಾಕಿ ಇದ್ದಲ್ಲಿ ಜನವರಿ ಮಾಹೆ ನಂತರ ಬಿಲ್ ಪಾವತಿಗೆ ಗಮನಹರಿಸಬಹುದೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿರುವ ತಾಲ್ಲೂಕುಗಳಿಗೆ ಭೇಟಿ ನೀಡಿ ಕ್ರಿಯಾ ಯೋಜನೆಯನ್ನು ಪರಿಶೀಲಿಸಲು ಸೂಚಿಸಿದರು. ಪ್ರತಿ ತ್ರೈಮಾಸಿಕ ಅನುದಾನ ಬಿಡುಗಡೆಯಾದಂತೆ ಕಾರ್ಯಕ್ರಮಗಳಲ್ಲಿ ಪ್ರಗತಿ ಸಾಧಿಸಿರುವ ಬಗ್ಗೆ ಮುಖ್ಯ ಲೆಕ್ಕಾಧಿಕಾರಿ ಹಾಗೂ ಮುಖ್ಯ ಯೋಜನಾಧಿಕಾರಿರವರು ಪರಿಶೀಲಿಸಲು ಸಹ ತಿಳಿಸಿದರು.
ಕಾಮಗಾರಿ ಅನುಷ್ಠಾನ ಸಂಬಂಧ ಹಾಗೂ ಇತರೆ ಕಾರ್ಯಕ್ರಮ ಅನುಷ್ಠಾನ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಸ್ಯೆಯಿದ್ದಲ್ಲಿ ವೈಯಕ್ತಿಕ ಗಮನಹರಿಸಿ ಪರಿಶೀಲಿಸಿ ಬಗೆಹರಿಸಿಕೊಳ್ಳಬೇಕು. ತಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಆಗದಿದ್ದಲ್ಲಿ ಜಿ.ಪಂ. ಸಚಿವಾಲಯದ ಅಧಿಕಾರಿಗಳು ಗಮನಕ್ಕೆ ತಂದು ಚರ್ಚಿಸಲು ತಿಳಿಸಿದರು.
ಔಷಧಿ ಸಂಬಂಧಿತ ಹಾಗೂ ಇತರೆ ತುರ್ತು ಇದ್ದಲ್ಲಿ ಕೂಡಲೇ ಇಲಾಖಾಧಿಕಾರಿಗಳು ಕಡತ ಮಂಡಿಸಿ ಚರ್ಚಿಸಿದಲ್ಲಿ ಮುಂದಿನ ಕ್ರಮ ವಹಿಸುವುದಾಗಿ ತಿಳಿಸಿದರು.
ಕುಂದುಕೊರತೆ ಆಲಿಕೆ
ಸಾರ್ವಜನಿಕ ಕುಂದುಕೊರತೆ ಆಲಿಸುವುದು ಪ್ರತಿ ಸೋಮವಾರದ ಜೊತೆಗೆ ಗುರುವಾರವು ಮಧ್ಯಾಹ್ನ 3 ರಿಂದ 4 ಘಂಟೆವರೆಗೆ. ತಾಲ್ಲೂಕಿನ ನೋಡಲ್ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ತಿಳಿಸಿದರು.
ಉಪ ಕಾರ್ಯದರ್ಶಿ(ಅಭಿವೃದ್ಧಿ) ಬಾಬು ಅವರು ಮಾತನಾಡಿ, 2025-26ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಜಿಲ್ಲಾ ಪಂಚಾಯತ್ ಅನಿರ್ಬಂದಿತ ಅನುದಾನದಡಿ ಜಿಲ್ಲೆಗೆ ರೂ.6.24 ಕೋಟಿಗಳನ್ನು ಹಂಚಿಕೆ ಮಾಡಲಾಗಿದ್ದು, ಹಾಗೂ ರಾಜ್ಯ ಹಣಕಾಸು ಆಯೋಗದ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದಡಿ ತಾಲ್ಲೂಕುಗಳಿಗೆ ಕೆ.ಆರ್.ಪೇಟೆ- ರೂ 2,48,29,271 ಮದ್ದೂರು-
ರೂ 2,50,97,046 , ಮಳವಳ್ಳಿ- ರೂ2,49,28,199, ಮಂಡ್ಯ- ರೂ 2,53,95,398, ನಾಗಮಂಗಲ- ರೂ 2,36,91,84, ಪಾಂಡವಪುರ ರೂ2,32,64,620 ಹಾಗೂ ಶ್ರೀರಂಗಪಟ್ಟಣ- ರೂ 2,29,27,134 ಒಟ್ಟು ರೂ 17,01,33,510 ಹಂಚಿಕೆ ಮಾಡಲಾಗಿದೆ ಅನಿರ್ಬಂದಿತ ಅನುದಾನಕ್ಕೆ ಮಾರ್ಗಸೂಚಿಯನ್ವಯ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ತಿಳಿಸಿದರು.
ಸಭೆಯಲ್ಲಿ ಉಪಕಾರ್ಯದರ್ಶಿ ಆಡಳಿತ ಲಕ್ಷ್ಮಿ, ಮುಖ್ಯ ಯೋಜನಾಧಿಕಾರಿ ಧನುಷ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.




