ಆಧುನಿಕ, ನವ ಮೈಸೂರಿನ ನಿರ್ಮಾತೃ, ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜಒಡೆಯರ್ ಅವರ ದೂರದೃಷ್ಟಿಯ ಆಡಳಿತದಿಂದಾಗಿ ಮೈಸೂರು ರಾಜ್ಯವು ಸಮಗ್ರವಾದ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದು ಸಮಾಜ ಸೇವಕ ಡಾ.ಕೆ.ಎಂ.ಶಿವಪ್ಪ ಅಭಿಮಾನದಿಂದ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ನಾಲ್ವಡಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಆಣೆಕಟ್ಟೆ ನಿರ್ಮಿಸಿ ಬರಡಾಗಿದ್ದ ಮಂಡ್ಯ ಜಿಲ್ಲೆಯನ್ನು ಭತ್ತ, ಕಬ್ಬು, ತೆಂಗು ಬೆಳೆಯುವ ಬಂಗಾರದ ಭೂಮಿಯನ್ನಾಗಿಸಿ ಜಿಲ್ಲೆಯ ಜನರು ನೆಮ್ಮದಿಯ ಜೀವನ ನಡೆಸಲು ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಣೆಕಟ್ಟೆ ಸಂಪೂರ್ಣಗೊಳ್ಳಲು ಹಣಕಾಸು ಸಮಸ್ಯೆ ಎದುರಾದಾಗ ಅರಮನೆಯ ತಿಜೋರಿಯಲ್ಲಿದ್ದ ಚಿನ್ನ, ವಜ್ರದ ಆಭರಣಗಳನ್ನು ಮುಂಬೈ ಮಹಾ ನಗರದ ಮಾರಾಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಆಣೆಕಟ್ಟೆಯ ಕಾಮಗಾರಿ ಸಂಪೂರ್ಣಗೊಳಿಸಿ ಕನ್ನಂಬಾಡಿ ಆಣೆಕಟ್ಟೆಯನ್ನು ಜನತೆಯ ಸೇವೆಗೆ ಸಮರ್ಪಿಸಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಿವಪ್ಪ ಗುಣಗಾನ ಮಾಡಿದರು.
ತಹಶೀಲ್ದಾರ್ ಡಾ.ಅಶೋಕ್ ಮಾತನಾಡಿ ಶಿಕ್ಷಣ, ಆರೋಗ್ಯ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಕ್ರಾಂತಿ ಮಾಡಿದ ರಾಜರ್ಷಿ ನಾಲ್ವಡಿ ಅವರು ಮೀಸಲಾತಿ ವ್ಯವಸ್ಥೆಗೆ ಚಾಲನೆ ನೀಡಿ ತುಳಿತಕ್ಕೊಳಗದವರು ಹಾಗೂ ಶೋಷಿತ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡಿದ ಮಹಾನುಭಾವರಾಗಿದ್ದಾರೆ. ನಾಲ್ವಡಿ ಅವರ ಸಮಾಜ ಸೇವಾ ಕಾರ್ಯಗಳು ಹಾಗೂ ನಾಡಿನ ಅಭಿವೃದ್ಧಿಗೆ ಕೈಗೊಂಡ ಧಿಟ್ಟ ಕ್ರಮಗಳು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಿವೆ ಎಂದು ಸ್ಮರಿಸಿದರು.
ಬಹುಜನ ಸಮಾಜ ಪಾರ್ಟಿಯ ತಾಲೂಕು ಮುಖಂಡ ಗಂಗಾಧರ್, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷೆ ಬಿ.ಎಲ್. ಚಂದ್ರಕಲಾ, ಆರೋಗ್ಯ ಇಲಾಖೆಯ ಶೀಳನೆರೆ ಸತೀಶ್, ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ್, ಬಿಸಿಎಂ ಅಧಿಕಾರಿ ವೆಂಕಟೇಶ್, ಗ್ರೇಡ್-2 ತಹಶೀಲ್ದಾರ್ ಲೋಕೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




