ಬಿ.ಟಿ.ವಿಶ್ವನಾಥ್
ಕಾನೂನು ಸಂಬಂಧಿ ವಿಷಯಗಳ ಕುರಿತು ಅರಿವು ಮೂಡಿಸಲು ಕಾಲೇಜಿನ ಕಾರ್ಯಕ್ರಮಗಳಿಗೆ ಎನ್ಎಸ್ಎಸ್ ಕ್ಯಾಂಪ್ ಗಳಿಗೆ ಅತಿಥಿ ಉಪನ್ಯಾಸಕನನ್ನಾಗಿ ನನ್ನನ್ನು ಆಹ್ವಾನಿಸುವುದುಂಟು. ಉಪನ್ಯಾಸ ಮುಗಿದು ಪ್ರಶ್ನೋತ್ತರ ವೇಳೆಯಲ್ಲಿ ಸಾಮಾನ್ಯವಾಗಿ ಮೇಲ್ವರ್ಗದ ವಿದ್ಯಾರ್ಥಿಗಳು ಮೀಸಲಾತಿ ಕುರಿತು ಪ್ರಶ್ನೆಗಳನ್ನು ಕೇಳುವುದುಂಟು.
ಮೀಸಲಾತಿಯಿಂದ ದಲಿತರು ಸಿಕ್ಕಾಪಟ್ಟೆ ಮುಂದುವರಿದು ಬಿಟ್ಟಿದ್ದಾರೆಂದು ಅವರಿಗೆ ಮೀಸಲಾತಿ ಮುಂದುವರಿಸುವುದು ಅವಶ್ಯವಿಲ್ಲವೆಂದು ಮೀಸಲಾತಿ ಮುಂದುವರಿಸಿರುವುದರಿಂದ ಅನ್ಯ ಜಾತಿಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಮುಂತಾಗಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳುತ್ತಾರೆ. ನಾನು ಅವರಿಗೆ ಸರಳವಾಗಿ ಅರ್ಥವಾಗಲೆಂದು ಅವರಿಗೆ ಉತ್ತದೊಂದಿಗೆ ಮರು ಪ್ರಶ್ನೆಗಳನ್ನು ಹಾಕುತ್ತೇನೆ..

ಈಗ ನಿಮ್ಮೂರಿನಲ್ಲಿ ಮೀಸಲಾತಿಯಿಂದ ತುಂಬಾ ಮುಂದುವರಿದು ಕೋಟಿಗಟ್ಟಲೆ ಹಣ ಮಾಡಿದ ದಲಿತ ಕುಟುಂಬ ಒಂದಿದೆ ಎಂದುಕೊಳ್ಳಿ ಅವರಿಗೆ ಮೇಲ್ಜಾತಿಯ ಕುಟುಂಬಗಳು ಹೆಣ್ಣು ಕೊಡುತ್ತಾರಾ ? ಆ ದಲಿತ ಕುಟುಂಬದವರು ಸತ್ತರೆ ಮೇಲ್ಜಾತಿಯ ಸ್ಮಶಾನಗಳಲ್ಲಿ ಅವರ ಹೆಣಗಳನ್ನು ಹೂಳಲು ಅಥವಾ ಸುಡಲು ಅವಕಾಶ ನೀಡುತ್ತಾರಾ? ಅವರೂರಿನ ದೇವಸ್ಥಾನಗಳಲ್ಲಿ ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಾರಾ? ನೀವು ನಿಮ್ಮ ನಡುಮನೆಗೆ ಕರೆದು ಅವರಿಗೆ ಊಟ ಬಡಿಸುತ್ತೀರಾ? ಅಂತ ಕೇಳುತ್ತೇನೆ. ವಿದ್ಯಾರ್ಥಿಗಳು ಉತ್ತರಿಸಲು ತಡ ಬಡಾಯಿಸುತ್ತಾರೆ ಆಗ ನಾನು ಅವರಿಗೆ ಹೇಳುತ್ತೇನೆ, ನೋಡಿ ಮಕ್ಕಳೇ ಮೀಸಲಾತಿಯನ್ನು ಅವರಿಗಿಂತನೂ ಇತರ ಮೇಲ್ವರ್ಗದವರೊಂದಿಗೆ ಆರ್ಥಿಕ ಸಮಾನತೆಗಳಿಸುವ ಉದ್ದೇಶಕ್ಕಿಂತ ಮಿಗಿಲಾಗಿ ಸಾಮಾಜಿಕ ಸಮಾನತೆ ದಕ್ಕಿಸಿಕೊಡಲು ಅವರಿಗೆ ಮೀಸಲಾತಿ ನೀಡಲಾಗಿದೆ ಎಂದು ಹೇಳುತ್ತೇನೆ.
ಅಷ್ಟಕ್ಕೇ ನಿಲ್ಲಿಸದೆ ನೋಡಿ ಎಸ್ಸಿ, ಎಸ್ಟಿ ಎರಡು ವರ್ಗಗಳನ್ನು ಸೇರಿ 155ಕ್ಕೂ ಹೆಚ್ಚು ಜಾತಿಗಳಿವೆ. ಅವರಿಗೆ 18 ಪರ್ಸೆಂಟ್ ಮೀಸಲಾತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ದೇಶದಲ್ಲಿ ಎರಡು ಪರ್ಸೆಂಟ್ ಇರುವ ಬೆರಳೆಣಿಕೆಯ ಮೇಲ್ಜಾತಿಗಳಿಗೆ ಈಡಬ್ಲ್ಯೂಎಸ್ (Economically Weaker Sections) ಮೂಲಕ 10% ಮೀಸಲಾತಿ ನೀಡಿದೆ ಪ್ರಶ್ನೆ ಕೇಳುತ್ತಿರುವ ನೀವು ಕೂಡ ಮತ್ತು ನಿಮ್ಮ ಜಾತಿಯ ವಿದ್ಯಾರ್ಥಿಗಳು ಕೂಡ ಮೀಸಲಾತಿಯನ್ನು ಪಡೆಯುತ್ತಿದ್ದೀರಿ ಎನ್ನುತ್ತೇನೆ ಹಾಗೆ ಇನ್ ಕಮ್ (ಆದಾಯ) ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ ನೀಡದೆ ಇರುವವರು ಕೈ ಎತ್ತಿ ನೋಡೋಣ ಎಂದರೆ ಒಬ್ಬಿಬ್ಬರನ್ನು ಬಿಟ್ಟು ಯಾರೂ ಕೈ ಎತ್ತುವುದಿಲ್ಲ.
ನಾನು ಉಪನ್ಯಾಸ ಮುಗಿಸಿ ಹೊರಡುವಾಗ ಮೂರ್ನಾಲ್ಕು ಜನ ದಲಿತ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ ಬಹಳ ಸಂಕೋಚ ಮುಜುಗರದಿಂದ ಸಹಪಾಠಿಗಳು ನಮ್ಮನ್ನು ಕೂಡ ಹೀಗೆಲ್ಲಾ ಪ್ರಶ್ನೆ ಕೇಳಿ ಕಾಡುತ್ತಾರೆ ಸರ್ ಆದರೆ ನಮಗೆ ಹೀಗೆಲ್ಲಾ ಉತ್ತರಿಸಲು ಗೊತ್ತಾಗುವುದೇ ಇಲ್ಲ ಸಾರ್ ಎಂದು ಅಲವತ್ತುಕೊಳ್ಳುತ್ತಾರೆ.
ಜಾತಿ ವಿಷ ಭಾರತದ ನರನಾಡಿಗಳನ್ನು ಆಕ್ರಮಿಸಿ ಮಾನವ ಸೌಹಾರ್ದದ ಅಂತಸ್ಸತ್ವವನ್ನೇ ಕಸಿಯುತ್ತಿದೆ “ಹಿಂದು ನಾವೆಲ್ಲ ಒಂದು” ಎಂದು ದಲಿತ ಶೂದ್ರ ಯುವಕರ ಬ್ರೈನ್ ವಾಶ್ ಮಾಡಿ ಕೋಮುಗಲಭೆಯ ಖೆಡ್ಡಕ್ಕೆ ಕೆಡುವವ ರಾಜಕೀಯ ಪಕ್ಷ ಮತ್ತು ದೇಶದ ಮಾನವ ಸೌಹಾರ್ದ ಸರಪಳಿಗೆ ಬೆಂಕಿ ಹಚ್ಚಲು ಆ ಪಕ್ಷಕ್ಕೆ ಕಾರಣವಿತ್ತಾ ? ಎಂದು ತನ್ನ ಸುದೀರ್ಘ ಆಡಳಿತದಲ್ಲಿ ವಹಿಸಿದ ಸೈದ್ದಾಂತಿಕ ಮೌನ ಕಾರಣ ಎಂದು ಆತ್ಮಾವಲೋಕನ ಮಾಡಿಕೊಳ್ಳದ ಇನ್ನೊಂದು ಪಕ್ಷ ಮತ್ತು ಜಗದ ಪ್ರಾಣಿ ಪಕ್ಷಿಗಳ ಸಂಕುಲ ಆಚರಿಸದ ಭೇದ ಭಾವವನ್ನು ಆಚರಿಸುವ ಮೂರ್ಖ ಮನುಷ್ಯರು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ.
ಮೊನ್ನೆ ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸುವ ಆ ಪ್ರಕರಣಗಳ ಕುರಿತು ಅವಲೋಕಿಸುವ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆ ಜಿಲ್ಲೆಯ ಮತ್ತಿತರ ಇಲಾಖೆಗಳ ಮುಖ್ಯಸ್ಥರ ಹಾಜರಿ ಯೊಂದಿಗೆ ನಡೆದಿತ್ತು. ಆ ಸಮಿತಿಯ ಸದಸ್ಯನಾಗಿ ಆಹ್ವಾನಿತನಾಗಿ ನಾನೂ ಕೂಡ ಭಾಗವಹಿಸಿದ್ದೆ. ಕತ್ತರಘಟ್ಟ ಗ್ರಾಮದ ದಲಿತ ಯುವಕನ ಸಾವಿನ ಸಂಬಂಧ ನಡೆದ ಚರ್ಚೆಯಲ್ಲಿ ನನ್ನ ಅಭಿಪ್ರಾಯ ದಾಖಲಿಸುವ ಸರತಿ ಬಂದಾಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯ ದಾಖಲಿಸಿದ್ದಲ್ಲದೆ, ನಾನು ಇನ್ನಿತರ ಕೆಲವು ಮಹತ್ವದ ಸಲಹೆಗಳನ್ನು ಆ ಸಂದರ್ಭ ದಾಖಲಿಸಿದೆ.
ಪರಿಶಿಷ್ಟ ಜಾತಿ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಕಂಪ್ಲೇಂಟ್ ದಾಖಲಾಗುವಾಗ ಸವರ್ಣೀಯರಿಂದ ಪಡೆಯುವ ಕೌಂಟರ್ ಕಂಪ್ಲೇಂಟುಗಳನ್ನು ಠಾಣೆಗಳು ಮಕ್ಕಿಕಾಮಕ್ಕಿ ನೋಂದಾಯಿಸುವುದನ್ನು ತಪ್ಪಿಸಿ ಅಂತಹ ಕೌಂಟರ್ ಕಂಪ್ಲೇಂಟುಗಳು ಎಸ್ಪಿ ಅವರ ಅನುಮೋದನೆಯ ನಂತರವೇ ದಾಖಲಾಗುವಂತೆ ನೋಡಿಕೊಳ್ಳಬೇಕೆಂದು ಸಲಹೆ ಇತ್ತೆ. ಸಮಿತಿಯ ಪರಿಧಿ ಮೀರಿದರೂ ಕೂಡ ರಾಜ್ಯದ ದೇವಾಲಯಗಳು ವೇದ ಆಗಮಗಳನ್ನು ಕಲಿತ ದಲಿತ ಅರ್ಚಕರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಮತ್ತು ಚರ್ಚು ಮಸೀದಿಗಳಲ್ಲಿ ಕೂಡ ಮತಾಂತರಗೊಂಡ ದಲಿತ ಸಮುದಾಯದ ವ್ಯಕ್ತಿ ಮುಲ್ಲಾ ಫಾದರ್ ಗಳು ಆಗಿ ನೇಮಕಗೊಳ್ಳಲು ಅವಕಾಶವಿರುವ ಕಾಯ್ದೆ ರೂಪಿತವಾಗಬೇಕೆಂಬ ನನ್ನ ವೈಯುಕ್ತಿಕ ಸಲಹೆಯನ್ನು ಸರಕಾರಕ್ಕೆ ಕಳುಹಿಸಿಕೊಡಬೇಕೆಂದು ಸಮಿತಿಯಲ್ಲಿ ಮನವಿ ಮಾಡಿಕೊಂಡೆ.
ಕೋಮು ಸೌಹಾರ್ದ ಮತ್ತು ಜಾತಿ ಸಾಮರಸ್ಯದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆ ಯಾವಾಗಲೂ ಮುಂದು. ಜಿಲ್ಲೆಗೆ ಕಾಲಿಟ್ಟಿರುವ ಕೋಮುವಾದಿ ರಾಜಕೀಯವನ್ನು ನಿಯಂತ್ರಿಸಿದರೆ ಸಾಕು ಅಲ್ಲೊಂದು ಇಲ್ಲೊಂದು ಜರುಗುವ ಜಾತಿ ದೌರ್ಜನ್ಯಗಳು ಕೂಡ ನಿಂತು ಹೋಗುತ್ತವೆ ಅಂತ ಕೂಡ ನಾನು ಹೇಳಿದೆ. ಬಹುಶಃ ಈ ಲೇಖನವನ್ನು ಓದಿದ ಭಾರತೀಯ ಉಪಖಂಡದಿಂದ ಬೌದ್ಧ ಧರ್ಮವನ್ನು ಓಡಿಸಿದವರ ಅನುಯಾಯಿಗಳು ಕನಲಬಹುದು.
(ಲೇಖಕರು, ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ನಿನ ಮಂಡ್ಯ ಜಿಲ್ಲೆಯ ಅಧ್ಯಕ್ಷರು)




