Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮಹನೀಯರನ್ನು ಪ್ರತಿದಿನವು ಸ್ಮರಿಸಬೇಕು ; ಡಾ.ಕುಮಾರ

ಬುದ್ಧ, ಬಸವ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಾವಿತ್ರಿ ಬಾಯಿಪುಲೆ ಅವರಂತಹ  ಮಹನೀಯರನ್ನು ಪ್ರತಿದಿನವು ಸ್ಮರಿಸಬೇಕು, ಆ ಮೂಲಕ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಶ್ರೀರಂಗಪಟ್ಟಣದ ತಾಲ್ಲೂಕಿನ ಆಲದಹಳ್ಳಿಯಲ್ಲಿ ಅರುಣೋದಯ ಕಲಾತಂಡ, ಸರ್ಕಾರಿ ಪ್ರಾಥಮಿಕ ಪಾಠಶಾಲೆ ಇವರ ವತಿಯಿಂದ ನಡೆದ ಬುದ್ಧ, ಬಸವ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಾವಿತ್ರಿ ಬಾಯಿಪುಲೆ ಜಯಂತಿ ಹಾಗೂ ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಲೆ ಮುಚ್ಚುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಶಾಲೆಗೆ ಮಕ್ಕಳನ್ನು ಸೇರಿಸಿದ ಮಂಜುಳ ಅವರ ಪ್ರಯತ್ನ ಶ್ಲಾಘನೀಯ. ಅವರ ಮಾನವೀಯತೆ, ಹೃದಯವಂತಿಗೆ ಸಾಟಿಯಿಲ್ಲ ಎಂದರು.

ಪ್ರೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು, ಉತ್ತಮವಾದ ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿಸಬೇಕು. ಪೋಷಕರು ಮಕ್ಕಳ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಳ್ಳದೇ ಅವರ ತಪ್ಪುಗಳನ್ನು ತಿದ್ದುವ ಮೂಲಕ ಅವರಿಗೆ ಸಂಸ್ಕಾರ ನೀಡಬೇಕೆಂದರು.

ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಮೊದಲು ಮಾನವರಾಗಬೇಕು, ನಂತರ ಜಾಗೃತರಾಗಬೇಕು ಆನಂತರ ಶಿಕ್ಷಕರಾಗಬೇಕು ಎಂದರು.

ಶಿಕ್ಷಣ ವ್ಯವಸ್ಥೆ ನಮಗೆ ಮಾನವೀಯತೆಯನ್ನ ಕಲಿಸಿದೆಯೇ ? ನಾವು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುತ್ತಿದ್ದೇವೆಯೇ ? ಸಮ ಸಮಾಜ ನಿರ್ಮಾಣವಾಗಿದೆಯೇ ? ಎಂದು ಪ್ರಶ್ನಿಸಿದ ಅವರು, ಬುದ್ಧ, ಬಸವ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಾವಿತ್ರಿ ಬಾಯಿಪುಲೆ ವಿಚಾರಗಳನ್ನು ಅರ್ಥ ಮಾಡಿಕೊಂಡು ಅನುಸರಿಸುವ ಮೂಲಕ ನಾವು ಸಮಾಜಕ್ಕೆ ಮಾದರಿಯಾಗಬೇಕೆಂದು ಆಶಿಸಿದರು.

ಆಲದಹಳ್ಳಿ ಮಂಜಳಾ ಪ್ರಾಸ್ತಾವಿಕ ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಡಾ.ಕುಮಾರ ಅವರು ಜಿಲ್ಲಾಧಿಕಾರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನನ್ನ ಊರಿನಲ್ಲಿ ಹೋದ ವರ್ಷ ಸರ್ಕಾರಿ ಶಾಲೆ ಮುಚ್ಚಿದ್ದು, ಆನಂತರ ಶಾಲೆಗೆ 4 ಜನ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಶಾಲೆಯನ್ನು ಉಳಿಸಿದ್ದಾರೆ ಎಂದು ಸ್ಮರಿಸಿದರು.

ನವೋದಯ ತರಬೇತಿ ಶಾಲೆಯ ಕನ್ನಿಕಾ ಶಿಲ್ಪ, ಅರುಣೋದಯ ಕಲಾತಂಡದ ಅಧ್ಯಕ್ಷರಾದ ಆಲದಹಳ್ಳಿ ಮಂಜುಳಾ ಹಾಗೂ ಗಾಯಕ ಹುರುಗಲವಾಡಿ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಹೋರಾಟಗಾರ್ತಿ ಸುನಂದ ಜಯರಾಮ್, ಮಹಿಳಾ ಮುನ್ನೆಡೆ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ