ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ 18 ಎಕರೆ ಭೂಮಿ ಉಳಿಸಲು ಇದೇ ಜೂ. 26 ರಿಂದ ಕನ್ನಡಿಗರ ಜಾಗೃತಿ ಆಂದೋಲನಾ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಮಂಡ್ಯ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯಲ್ಲಿ ತಮಿಳು ಕಾಲೋನಿ ನಿರ್ಮಿಸಲಾಗಿದೆ. ಈ ನಿವಾಸಿಗಳಿಗಾಗಿ ಮಂಡ್ಯ ಕೆರೆ ಅಂಗಳದ ವಿವೇಕಾನಂದ ಬಡಾವಣೆಯಲ್ಲಿ ರಾಜೀವ್ ಆವಾಸ್ ಯೋಜನೆಯಡಿ 38 ಕೋಟಿ ವೆಚ್ಚದಲ್ಲಿ 576 ಮನೆಗಳನ್ನು ನಿರ್ಮಿಸಲಾಗಿದೆ.
ಈ ತಮಿಳು ಕಾಲೋನಿ ನಿವಾಸಿಗಳಿಗೆ ನಾಲ್ಕು ಬಾರಿ ಮನೆಗಳನ್ನು ನಿರ್ಮಿಸಿಕೊಟ್ಟರು ಅಲ್ಲಿಗೆ ತೆರಳದೆ ಮಂಡ್ಯ ಮೆಡಿಕಲ್ ಕಾಲೇಜು ಅಭಿವೃದ್ದಿಯಾಗದಂತೆ ತಡೆ ಒಡ್ಡುತ್ತಲೆ ಬಂದಿದ್ದಾರೆ.ಆ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ತಮಿಳು ಕಾಲೋನಿ ನಿವಾಸಿಗಳು ಸವಾಲೊಡ್ಡುತ್ತಲೆ ಬಂದಿದ್ದು ಈ ಕುರಿತು ಕನ್ನಡಿಗರನ್ನು ಜಾಗೃತಿಗೊಳಿಸಲಾಗುವುದು. ಮೊದಲ ಹಂತದಲ್ಲಿ ಮಂಡ್ಯ ನಗರದ 35 ವಾರ್ಡುಗಳಲ್ಲಿ ಬೈಕ್ ಹಾಗೂ ತೆರೆದ ವಾಹನದ ಮೂಲಕ ತೆರಳಿ ಒಂದು ಲಕ್ಷ ಕರಪತ್ರ ಹಂಚಿ ಮೆಡಿಕಲ್ ಕಾಲೇಜು ಅಭಿವೃದ್ದಿಗೆ ಕೈ ಜೋಡಿಸುವಂತೆ ಕನ್ನಡಿಗರಲ್ಲಿ ಮನವಿ ಮಾಡಲಾಗುವುದು. ನಗರದಾದ್ಯಂತ ಪೋಸ್ಟರ್ ಹಾಗೂ ಸ್ಟಿಕ್ಕರ್ ಗಳನ್ನು ಸಹ ಅಳವಡಿಸಿ ಮೆಡಿಕಲ್ ಕಾಲೇಜು ಆಸ್ಪತ್ರೆ ವಿಸ್ತರಣೆ ಹಾಗೂ ಅಭಿವೃದ್ದಿಯ ಮಹತ್ವವನ್ನು ಜಾಗೃತಿಗೊಳಿಸಲಾಗುವುದು ಎಂದಿದ್ದಾರೆ.
ಗೋಷ್ಠಿಯಲ್ಲಿ ವೆಂಕಟೇಶ್, ನಾಗರಾಜ್, ಮುದ್ದೇಗೌಡ, ಪ್ರವೀಣ್, ಪಿ.ಎ.ಜೋಸೆಫ್ ಇದ್ದರು.




