ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಪು.ತಿ.ನ ಮತ್ತು ಕೆ.ಎಸ್.ಎನ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ `ಡಾ.ಹೆಚ್.ಎಸ್.ವೆಂಕಟೇಶ್ಮೂರ್ತಿ ಇಷ್ಟು ಕಾಲ ಒಟ್ಟಿಗಿದ್ದು’ ಕಾರ್ಯಕ್ರಮವನ್ನು ಜೂನ್ ೨೩ರ ಸಂಜೆ ೫.೩೦ಕ್ಕೆ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಡಾ.ಕೆ.ಎಸ್.ನ ಟ್ರಸ್ಟ್ನ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ವಿಚಾರವಾಗಿ ಅಗಣ್ಯ ಸೇವೆ ಸಲ್ಲಿಸಿದ ಡಾ.ಹೆಚ್.ಎಸ್.ವೆಂಕಟೇಶ್ಮೂರ್ತಿ ಅವರ ನೆನಪಿನಲ್ಲಿ ಅವರಿಗೆ ಪುಷ್ಪನಮನ, ನುಡಿನಮನ, ಗೀತನಮನ, ನೃತ್ಯನಮನ ಸಲ್ಲಿಸಲು ಮತ್ತು ಅವರ ಜನ್ಮದಿನ ಆಚರಿಸುವ ಸಲುವಾಗಿ ಸದರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಹೆಚ್.ಎಸ್.ವೆಂಕಟೇಶ್ಮೂರ್ತಿ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಓ ಕೆ.ಆರ್.ನಂದಿನಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪುಷ್ಪನಮನ ಸಲ್ಲಿಸಲಿದ್ದು, ಡಾ.ಕೆ.ಎಸ್.ನ ಟ್ರಸ್ಟ್ನ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಉದ್ಘಾಟಿಸುವರು, ಡಾ.ಪು.ತಿ.ನ ಟ್ರಸ್ಟ್ನ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್ರಾವ್, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ಗೌಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್, ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ನುಡಿನಮನ ಸಲ್ಲಿಸಲಿದ್ದು, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನವಾಸ ಉಡುಪ, ಡಾ.ಅಪ್ಪಗೆರೆ ತಿಮ್ಮರಾಜು, ಡೇವಿಡ್ ಪ್ರತಿಭಾಂಜಲಿ, ಎಂ.ಎಸ್.ಶ್ರೀಧರ್, ಮಂಗಳ ರವಿ, ಜೋಗಿ ಸುನೀತಾ, ಡಾ.ವರ್ಷಾ ಹೂಗಾರ್ ಹಾಗೂ ಸ್ಥಳೀಯ ಗಾಯಕರಿಂದ ಗೀತ ನಮನ, ನಂದಿಕೇಶ್ವರ ಭರತನಾಟ್ಯ ಕಲಾ ಶಾಲೆಯ ವಿದೂಷಿ ಶೈಲಜಾ ಅವರಿಂದ ನೃತ್ಯ ನಮನ, ವಾದ್ಯ, ವೃಂದ ಗಾಯನ ಕಲಾವಿದರಿಂದ ನಮನ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಖಜಾಂಚಿ ಪ್ರಶಾಂತ್ ಉಡುಪ, ಪ್ರತಿಭಾಂಜಲಿ ಡೇವಿಡ್ ಇದ್ದರು.




