Saturday, November 21, 2026

ಪ್ರಾಯೋಗಿಕ ಆವೃತ್ತಿ

ದೇವನಹಳ್ಳಿ ರೈತರ ಮೇಲೆ ದೌರ್ಜನ್ಯ | ಮಂಡ್ಯದಲ್ಲಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ- ಆಕ್ರೋಶ

ದೇವನಹಳ್ಳಿಯಲ್ಲಿ ರೈತರು ಮತ್ತು ರಾಜ್ಯದ ಚಳವಳಿ ಮುಂದಾಳುಗಳ ಮೇಲೆ ನಡೆದ ಪೊಲೀಸ್‌ ದಬ್ಬಾಳಿಕೆ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮಂಡ್ಯದಲ್ಲಿ ವಿವಿಧ ಪ್ರಗತಿಪರ ಹಾಗೂ ನಾಗರೀಕ ಸಂಘಟನೆಗಳು ಗುರುವಾರ ಮಂಡ್ಯನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.

ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟಸಿದ ಹೋರಾಟಗಾರರು, ಕೆಲ ಕಾಲ ರಸ್ತೆ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಮೊಳಗಿಸಿದರು.

ಅತ್ಯಂತ ಶಾಂತಿಯುತವಾಗಿ ನಡೆದಿದ್ದ ದೇವನಹಳ್ಳಿ ರೈತರ ಪ್ರತಿಭಟನೆಯನ್ನು ನಿನ್ನೆಯ ದಿನ ವಿಪರೀತ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ನಡೆಸಿದೆ. ಮಹಿಳೆಯರು-ಮಕ್ಕಳನ್ನೂ ಒಳಗೊಂಡು ಎಲ್ಲ ಮುಂದಾಳುಗಳನ್ನೂ ಅನಾಗರಿಕವಾಗಿ ಸಿಕ್ಕಾಪಟ್ಟೆ ಎಳೆದಾಡಿ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಂತಿಯುತ ಪ್ರತಿಭಟನಾ ಸಮಾವೇಶದ ಮೇಲೆ ನಡೆಸಲಾಗಿರುವ ಪೊಲೀಸ್ ದೌರ್ಜನ್ಯ ಮತ್ತು ಕೃಷಿ ಭೂಮಿಯನ್ನು ರೈತರಿಂದ ಒತ್ತಾಯಪೂರ್ವಕವಾಗಿ ಕಸಿಯುವ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಘೋಷಿಸಿದರು.

 ಹಕ್ಕೊತ್ತಾಯಗಳು

1.ಹೋರಾಟಗಾರರೊಂದಿಗೆ ಹೀನಾಯವಾಗಿ ವರ್ತಿಸಿ ಅನಗತ್ಯ ಬಲಪ್ರಯೋಗ ಮಾಡಿದ ಡಿಸಿಪಿ ಸಜಿತ್ ಅವರನ್ನು ಸಸ್ಪೆಂಡ್ ಮಾಡಬೇಕು. ಡಿಸಿಪಿ ಮತ್ತು ಪೊಲೀಸ್ ಅತಿರೇಕದ ವರ್ತನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು.

2. ಕೂಡಲೇ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವೇ ಹೋರಾಟಗಾರರೆಲ್ಲರನ್ನೂ ಜೈಲಿಗೆ ಹಾಕಬೇಕು. (ಯಾರು ಜಾಮೀನು ಪಡೆಯುವುದಿಲ್ಲ)

ಇಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಾಗೂ ಬೆಂಗಳೂರಿನಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಭಿವೃದ್ಧಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆಕೋರ ಬಂಡವಾಳಿಗರಿಗೆ ಲಾಭ ಮಾಡಿಕೊಡಲು, ಕೃಷಿ-ರೈತರ ಬದುಕನ್ನು ನಾಶ ಮಾಡಿ ಅಸಂಖ್ಯಾತ ರೈತ ಸಮುದಾಯವನ್ನು ಬೀದಿಪಾಲು ಮಾಡಲು ಹೊರಟಿರುವ ಸರ್ಕಾರದ ಈ ಹೀನ ನಡೆಯನ್ನು ರೈತರು ಮತ್ತು ಕೃಷಿಯ ಬಗ್ಗೆ ಗೌರವ ಇರುವ ಎಲ್ಲರೂ ಪ್ರತಿಭಟಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ರೈತರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮದ ಭೂಮಿಯನ್ನು ಬಂಡವಾಳಿಗರ ಒಪ್ಪಿಸಲು ನಾಚಿಕೆಡಿನ ಸಂಗತಿ ಎಂದು ಕಿಡಿಕಾರಿದರು.

ರೈತ, ಕಾರ್ಮಿಕ, ದಲಿತ, ಮಹಿಳಾ ಹಾಗೂ ಜನ ವಿರೋಧಿ ಸರ್ಕಾರಗಳ ತುಂಬಾ ದಿನ ಅಧಿಕಾರ ನಡೆಸಲು ಸಾಧ್ಯವಿಲ್ಲ. ಈ ನೆಲ ಇಂತಹ ದರ್ಪ ದೌರ್ಜನ್ಯವನ್ನು ಮೆಟ್ಟಿ ನಿಂತ ಇತಿಹಾಸವನ್ನು ನೋಡಿದೆ. ಸಿದ್ದರಾಮಯ್ಯ ಸರ್ಕಾರ ಮುಂದಿನ ಪರಿಣಾಮ ಎದುರಿಸಲು ಸಿದ್ಧವಾಗಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಸಿಪಿಐಎಂ ಕೃಷ್ಣೇಗೌಡ, ಸಿಐಟಿಯು ಸಿ.ಕುಮಾರಿ, ಕರ್ನಾಟಕ ಪ್ರಾಂತ ರೈತಸಂಘದ ಭರತ್ ರಾಜ್, ಕರ್ನಾಟಕ ಜನಶಕ್ತಿ ಪೂರ್ಣಿಮ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮುಖಂಡರಾದ ಲತಾ ಶಂಕರ್, ಹನುಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ