ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಗ್ರಾಮ ಸಭೆ ಅಧಿಕಾರಿಗಳ ಗೈರು ಹಾಜರಿಯಿಂದ ಮುಂದೂಡಿದ ಘಟನೆ ಜರುಗಿದೆ.
ಸೋಮವಾರ ಸಂಜೆ 5 ಗಂಟೆವರೆಗೆ ಜರುಗಿದ ಸಭೆಯಲ್ಲಿ 28 ಸರ್ಕಾರಿ ಇಲಾಖೆಗಳನ್ನು ಆಹ್ವಾನಿಸಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದಾಗ ಮತ್ತೊಮ್ಮೆ ಅಧಿಕಾರಿಗಳನ್ನು ಕರೆದು ಸರ್ಕಾರಿ ಯೋಜನೆಗಳನ್ನು ಪ್ರಚುರಪಡಿಸುವಂತೆ ಸಭೆಯಲ್ಲಿ ಹಾಜರಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಂಪನ್ಮೂಲ ವ್ಯಕ್ತಿ ರಾಣಿ ಚಂದ್ರಶೇಖರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೋಭಾಶ್ರೀ ಹಕ್ಕುಚ್ಯುತಿ ಮಂಡನೆ ಮಾಡಿದರು.

ಇವತ್ತಿನ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳು, ಆಗಮಿಸಿರುವ ಅಧಿಕಾರಿಗಳಿಂದ ಮಾಹಿತಿ ಪಡೆದು ಉಳಿದ ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಶೀಘ್ರದಲ್ಲೇ ಮುಂದುವರಿದ ಗ್ರಾಮಸಭೆ ಆಯೋಜಿಸಲು ಸಭೆ ನಿರ್ಣಯ ಕೈಗೊಂಡಿತ್ತು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಅಕ್ರಮ ವಾಸ ಮಾಡುವ ಮನೆ ತೆರವು, ಗ್ರಾಮಕ್ಕೆ ಪೊಲೀಸ್ ಹೊರಠಾಣೆ ತೆರೆಯಲು ಸರ್ಕಾರಕ್ಕೆ ಪತ್ರ ಬರೆಯಲು ಸಭೆ ಒತ್ತಾಯಿಸಿತು.
ಗ್ರಾಮ ವ್ಯಾಪ್ತಿಯಲ್ಲಿ ನಿವೇಶನರಹಿತರಿಗೆ ಲಭ್ಯವಿರುವ ನಿವೇಶನಗಳನ್ನು ಲಭ್ಯತೆ ಆಧಾರದಲ್ಲಿ 2ನೇ ಹಂತದಲ್ಲಿ ವಿತರಿಸಲು ನಿರ್ಣಯ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು.
ಗ್ರಾಮದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು ಆಯ್ದ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸದಸ್ಯರಾದ ಸವಿತಾ ಮನವಿ ಮಾಡಿದ್ದಾಗ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸುವುದಾಗಿ ಪಿಡಿಒ ಚಂದ್ರು ಬಿ.ಆರ್ ಭರವಸೆ ನೀಡಿದರು.ಗ್ರಾಮದಲ್ಲಿ ಘನತ್ಯಾಜ್ಯ ಘಟಕ ಅರಂಭಿಸಲು ಶೀಘ್ರ ಕ್ರಮ ವಹಿಸಲು ಸಭೆ ನಿರ್ಣಯ ಕೈಗೊಂಡಿತ್ತು.
ಸಭೆಯಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಮನೋಹರ್, ಡಾ.ಲಕ್ಷ್ಮಿ, ತಾ.ಪಂ ಸಹಾಯಕ ನಿರ್ದೇಶಕ ಶ್ರೀಧರ್, ಗ್ರಾಪಂ ಅಧ್ಯಕ್ಷೆ ಮಾನಸ, ನೋಡೆಲ್ ಅಧಿಕಾರಿ ಅಸಿಡಿಪಿಒ ಅಮೃತ ವಿ.ಕುರುಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು




