ಸಮಾಜದಲ್ಲಿ ತುಳಿತಕ್ಕೊಳಗಾದ ಶೋಷಿತ ಸಮುದಾಯದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಆದ್ಯತೆ ನೀಡಬೇಕೆಂದು ಪತ್ರಕರ್ತ ಹಾಗೂ ಜಾಗೃತ ಕರ್ನಾಟದ ಮುಖಂಡ ಎನ್.ನಾಗೇಶ್ ಸಲಹೆ ನೀಡಿದರು.
ಮಂಡ್ಯ ತಾಲ್ಲೂಕಿನ ಹನಿಯಂಬಾಡಿ ಗ್ರಾಮದಲ್ಲಿ ಪತ್ರಕರ್ತ ಹನಿಯಂಬಾಡಿ ಜಗದೀಶ್ ಅವರ ಪುತ್ರಿ ಸಮೃದ್ಧಿ ಅವರ ಮೊದಲ ವರ್ಷದ ಹುಟ್ಟುಹಬ್ಬ ಆಚರಣೆ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಇಂದಿನ ಕಾಲದಲ್ಲಿಯೂ ಜಾತಿ ಎಂಬ ಕೊಳಕು ದೂರವಾಗಿಲ್ಲ, ಚಾಮರಾಜನಗರದ ಶಾಲೆಯೊಂದರಲ್ಲಿ ಅಡುಗೆ ಮಾಡುವ ಮಹಿಳೆ ದಲಿತರು ಎಂಬ ಕಾರಣಕ್ಕೆ, ಕೆಲವು ಮಕ್ಕಳು ಶಾಲೆಯನ್ನು ಬಿಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದೆ. 21 ಶತಮಾನದಲ್ಲಿ ಜಾತಿ ವ್ಯವಸ್ಥೆ ಇರುವುದು ನಾಚಿಕೆಗೇಡು. ಈ ವ್ಯವಸ್ಥೆಯನ್ನ ಮೆಟ್ಟಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದರು.
ಜಾಗೃತ ಕರ್ನಾಟಕದ ಸುಬ್ರಮಣ್ಯ, ಯುವ ಪ್ರಶಸ್ತಿ ಪುರಸ್ಕೃತ ಲಂಕೇಶ್ ಮಂಗಲ, ಪೊಲೀಸ್ ಇಲಾಖೆಯ ವೆಂಕಟೇಶ್ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಪತ್ರಕರ್ತ ಹನಿಯಂಬಾಡಿ ಜಗದೀಶ್ ಹಾಗೂ ಪತ್ನಿ ಚಾಂದಿನಿ ಉಪಸ್ಥಿತರಿದ್ದರು.




