ಮಂಡ್ಯನಗರದ ವೈದ್ಯಕೀಯ ಕಾಲೇಜು ಸಮೀಪ ತಮಿಳು ಕಾಲೋನಿ ಸೇರಿದಂತೆ ಸಂಪೂರ್ಣ ಒತ್ತುವರಿ ತೆರವುಗೊಳಿಸಬೇಕು, ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಂಡ್ಯನಗರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಮಂಗಳವಾರ ಬೈಕ್ ರ್‍ಯಾಲಿ ನಡೆಸಿದವು.

ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ ಸಮಿತಿ ಹಾಗೂ
ಕರುನಾಡ ಸೇವಕರು ಸಂಘಟನೆ ನೇತೃತ್ವದಲ್ಲಿ ಮಂಡ್ಯನಗರದ ವಿವಿಧೆಡೆ ಬೈಕ್ ಜಾಥಾ ನಡೆಸಿದರು.

ಎಂಟು ನೂರು ಹಾಸಿಗೆಗಳ ಈ ಆಸ್ಪತ್ರೆಗೆ ಒಳರೋಗಿಗಳು ಮಾತ್ರವಲ್ಲದೆ ಪ್ರತಿ ನಿತ್ಯ ಮೂರು ಸಾವಿರಕ್ಕು ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಐದು ನೂರು ವಿದ್ಯಾರ್ಥಿಗಳು ಇಲ್ಲಿ ಎಂಬಿಬಿಎಸ್ ನೂರಕ್ಕು ಹೆಚ್ಚು ಮಂದಿ ಪ್ಯಾರಾ ಮೆಡಿಕಲ್ ಕಲಿಯುತ್ತಿದ್ದಾರೆ. ಹಲವು ಕೊರತೆಗಳ ನಡುವೆ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಡ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿದೆ. ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೃದ್ರೋಗ ಆಸ್ಪತ್ರೆ, ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ಟ್ರಾಮಾ ಕೇರ್ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ನಿರ್ಮಾಣವಾಗಬೇಕಿದೆ. ಆದ್ದರಿಂದ ಜಾಗದ ಅವಶ್ಯಕತೆ ಇದ್ದು, ಎಲ್ಲ ಒತ್ತುವರಿಯನ್ನು ತೆರವು ಮಾಡಬೇಕೆಂದು ಒತ್ತಾಯಿಸಿದರು.
ಸ್ವತಂತ್ರ ಪೂರ್ವದಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಗೆ ೪೦ ಎಕರೆ ಭೂ ಸ್ವಾಧೀನವಾಗಿದ್ದರು ಅದರಲ್ಲಿ ೨೬ ಎಕರೆ ಮಾತ್ರ ಅದರ ಸ್ವಾಧೀನದಲ್ಲಿದೆ. ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡ ಇನ್ನುಳಿದ ೧೪ ಎಕರೆಯಲ್ಲಿ ತಮಿಳು ಕಾಲೋನಿ ವಾಸಿಗಳು ಹಾಗೂ ಕೆಲ ಬಲಾಢ್ಯರು ಮೆಡಿಕಲ್ ಕಾಲೇಜು ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ದೂರಿದರು.
ರ್‍ಯಾಲಿಯಲ್ಲಿ ರೈತಸಂಘ ಸುನಂದ ಜಯರಾಂ, ಕರವೇ ಶಿವರಾಮೇಗೌಡ, ನಾಗಣ್ಣಗೌಡ, ಶಂಕರೇಗೌಡ, ರಮೇಶ್ ಗೌಡ, ಎಸ್.ನಾರಾಯಣ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




