ತಮ್ಮ 40 ವರ್ಷಗಳ ಸುಧೀರ್ಘ ರಾಜಕಾರಣ ಜೀವನದಲ್ಲಿ ಸರಳವಾಗಿ ಶಿಸ್ತು ಬದ್ಧ ಜೀವನ ನಡೆಸಿ, ಕಲುಷಿತಗೊಂಡಿರುವ ಇಂದಿನ ಕೆಟ್ಟ ರಾಜಕಾರಣಕ್ಕೆ ಹಾಗೂ ನಾಗರಿಕ ಸಮಾಜಕ್ಕೆ ಮಾದರಿಯಾಗಿರುವ ಮಂಡ್ಯದ ಗಾಂಧಿ ಮಾಜಿ ಸ್ಪೀಕರ್ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ವಿಶೇಷ ವಾಗಿದೆ ಎಂದು ಆಳಂದ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್ ಹೇಳಿದರು.
ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಟಾನವು ಕೃಷ್ಣ ಅವರ 85ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಾಡಿನ ವಿವಿಧ ಸಾಧಕರಿಗೆ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಅತೀ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬಡ ಜನರ ಬಗ್ಗೆ ಕಾಳಜಿ ವಹಿಸದೇ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಾ ನೈತಿಕವಾಗಿ ದಿವಾಳಿತನವನ್ನು ಪ್ರದರ್ಶನ ಮಾಡಿ ತನ್ನತನವನ್ನು ಕಳೆದುಕೊಂಡಿವೆ. ರಿಯಲ್ ಎಸ್ಟೇಟ್ ಕುಳಗಳು, ಶ್ರೀಮಂತರು, ಹಾಗೂ ಗಣಿ ಧಣಿಗಳು ಸೇರಿದಂತೆ ಪಟ್ಟಭದ್ರ ಹಿತಾಸಕ್ತಿಗಳನ್ನು ಓಲೈಕೆ ಮಾಡುತ್ತಾ ಹಣಬಲ ಹಾಗೂ ತೋಳ್ಬಲದಿಂದ ಅಧಿಕಾರವನ್ನು ಹಿಡಿಯಲು ರಹದಾರಿ ನೀಡುತ್ತಿವೆ. ಇಂದಿನ ರಾಜಕಾರಣಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ವ ಸಿದ್ಧಾಂತಗಳು ಕಣ್ಮರೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯರಾಗಿ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಕೃಷ್ಣ ಅವರು ನುಡಿದಂತೆ ನೇರವಾಗಿ ನಡೆಯುವ ಗಾಂಧಿಗಿರಿಯನ್ನು ಮೈಗೂಡಿಸಿಕೊಂಡಿರುವ ಸರಳ ಸಜ್ಜನ ರಾಜಕಾರಣಿಯಾಗಿದ್ದಾರೆ. ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನವು ಹಮ್ಮಿಕೊಂಡಿರುವ ಇಂದಿನ ಜನಪರ್ವಾದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೃಷ್ಣ ಅವರ ಅಭಿಮಾನಿಗಳು ಭಾಗವಹಿಸಿರುವುದೇ ಈ ಕಾರ್ಯಕ್ರಮದ ಸಾರ್ಥಕತೆಯ ಪ್ರತಿಬಿಂಬವಾಗಿದೆ ಎಂದು ಅಭಿಮಾನದಿಂದ ಬಿ.ಆರ್. ಪಾಟೀಲ್ ಹೇಳಿದರು.
ವಿಚಾರವಾದಿ ಪ್ರೊ.ಕಾಳೇಗೌಡ ನಾಗವಾರ ಅವರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ವಿಚಾರವಾದಿಗಳಾದ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಮಹಾತ್ಮ ಗಾಂಧೀಜಿ, ಭಗವಾನ್ ಬುದ್ಧ, ಬಸವಣ್ಣ, ಅಕ್ಕ ಮಹಾದೇವಿ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜೀವನದ ಆದರ್ಶಗಳು ಹಾಗೂ ತತ್ವ ಸಂದೇಶಗಳನ್ನು ಪಾಲಿಸುವ ಕೃಷ್ಣ ಅವರಂತಹ ರಾಜಕಾರಣಿಗಳು ಹಿಂದಿನ ರಾಜಕೀಯ ರಂಗದಲ್ಲಿ ವಿರಳವಾಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕಾಳೇಗೌಡ ನಾಗವಾರ, ರೈತ ಮುಖಂಡ ಎಂ ವಿ ರಾಜೇಗೌಡ ಕಿಕ್ಕೇರಿಯ ಖ್ಯಾತ ವೈದ್ಯ ಡಾಕ್ಟರ್ ಕೃಷ್ಣ ಹಾಗೂ ಪ್ರಗತಿಪರ ರೈತ ವಿಠಲಾಪುರ ಸುಬ್ಬೆಗೌಡ ಅವರಿಗೆ ಮಾಜಿ ಸ್ಪೀಕರ್ ಕೃಷ್ಣ ಪ್ರಶಸ್ತಿಗಳನ್ನು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕೃಷ್ಣ ಪ್ರಶಸ್ತಿಯೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೆ.ಆರ್.ಪೇಟೆ ಪುರಸಭಾ ಅಧ್ಯಕ್ಷ ಪಂಕಜ ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ. ಎಲ್.ದೇವರಾಜು, ಮಾಜಿ ಸ್ಪೀಕರ್ ಕೃಷ್ಣ ಅವರ ಧರ್ಮಪತ್ನಿ ಪ್ರೊ.ಇಂದ್ರಮ್ಮ, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆ ಹೊಸಳ್ಳಿ ಜವರಾಯಿಗೌಡ, ಕಾರ್ಯದರ್ಶಿ ಕತ್ತರಘಟ್ಟ ವಾಸು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರು ಹಾಗೂ ಸಂಘಟಕರಾದ ಅಂಚಿ. ಸಣ್ಣಸ್ವಾಮಿಗೌಡ, ಉಪಾಧ್ಯಕ್ಷ ಕೆ ಟಿ ಚಂದ್ರೇಗೌಡ ಸಹಕಾರಿದರ್ಶಿ ಕೆ.ಮಂಜುಳಾ ನಿರ್ದೇಶಕರಾದ ಬಿ. ಜವರಾಯಿಗೌಡ, ಚೆನ್ನಿಂಗೇಗೌಡ ಶೀಳನೆರೆ ಅಂಬರೀಶ್ ಎಂ.ಬಿ. ಹರೀಶ್ ಮತ್ತಿತರರು ಭಾಗವಹಿಸಿದ್ದರು.




