ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು, ಮಳವಳ್ಳಿ ಶಿವನಸಮುದ್ರದ ಬಳಿ ಹಾಗೂ ಕೆ.ಆರ್.ಪೇಟೆಯ ಭೂವರಹನಾಥಸ್ವಾಮಿ ದೇವಾಲಯದ ಬಳಿ ಕಾವೇರಮ್ಮನ ಆರತಿ ಮಾಡಿಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ. ಇನ್ನುಳಿದಂತೆ ಕೆಆರ್ಎಸ್ ಅಣೆಕಟ್ಟೆಯ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ಕೂಡ ಬೇಡ ಎಂದು ಪಾರಂಪರಿಕ ಸಂಶೋಧನ ತಜ್ಙರ ಸಮಿತಿ ಸದಸ್ಯ ಎನ್.ಎಸ್.ರಂಗರಾಜು ತಿಳಿಸಿದರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ರೈತ, ದಲಿತ, ಪ್ರಗತಿಪರ, ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ನಡೆದ ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ವಿಷಯ ಕುರಿತ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಎಲ್ಲಿ ಅಭಿವೃದ್ಧಿ ಹೊಂದಿಲ್ಲವೋ ಅಂತಹ ಸ್ಥಳದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಮಾಡಿ, ಕೇವಲ ಜನಗಳ ಪ್ರೀತಿ ಗಳಿಸಿ ಅನುಕಂಪ ಪಡೆಯಲು ಕಾವೇರಿ ಆರತಿ ಯೋಜನೆ ಮಾಡುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೆ.ಆರ್.ಎಸ್ ಪಾರಂಪರಿಕ ಪ್ರದೇಶ
ಕೃಷ್ಣರಾಜಸಾಗರ ಜಲಾಶಯ ಪಾರಂಪರಿಕ ಪ್ರದೇಶದಲ್ಲಿದೆ. ಅಣೆಕಟ್ಟೆಯನ್ನು ಚುರುಕಿಗಾರೆಯಿಂದ ನಿರ್ಮಿಸಲಾಗಿದೆಯೇ ವಿನಃ ಕಬ್ಬಿಣ, ಸಿಮೆಂಟ್, ಇಟ್ಟಿಗೆಯನ್ನು ಬಳಸಿಲ್ಲ. ಭೂಮಿಯಿಂದ 80 ರಿಂದ 100 ಅಡಿ ಆಳದ ಶಿಲಾಪದರದ ಮೇಲೆ 50 ಅಡಿ ಅಗಲ, 125 ಅಡಿ ಎತ್ತರಕ್ಕೆ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಯಾವುದೇ ಒಂದು ಕಟ್ಟಡ, ಅಣೆಕಟ್ಟೆಗೆ 60 ರಿಂದ 70 ವರ್ಷವಾದರೆ ಅದು ತನ್ನಿಂತಾನೇ ಪಾರಂಪರಿಕ ಪ್ರದೇಶವಾಗಿ ಘೋಷಣೆಯಾಗುತ್ತದೆ ಎಂದು ವಿವರಿಸಿದರು.
ಪಾರಂಪರಿಕ ಸಂರಕ್ಷಣಾ ಸಮಿತಿ ಪ್ರತಿ ಜಿಲ್ಲೆಯಲ್ಲಿದ್ದು, ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಅವರೇ ಇಂತಹವುಗಳನ್ನು ಗುರುತಿಸಿ ಪಾರಂಪರಿಕ ಪ್ರದೇಶ, ಕಟ್ಟಡಗಳೆಂದು ಘೋಷಿಸಬೇಕು. ಈ ಪಾರಂಪರಿಕ ಪ್ರದೇಶದ 350 ಮೀ. ಸುತ್ತಳತೆಯಲ್ಲಿ ಏನೂ ಇರಬಾರದು ಎಂದು ಕಾನೂನೇ ಇದೆ. ಮೈಸೂರು, ಬಿಜಾಪುರ, ಬೆಂಗಳೂರಿನಲ್ಲಿ ಮಾತ್ರ ಈ ಸಮಿತಿ ಸಕ್ರಿಯವಾಗಿದೆ. ಉಳಿದ ಜಿಲ್ಲೆಗಳಲ್ಲಿ ನಾಮಕಾವಸ್ಥೆಯಾಗಿ ಉಳಿದುಕೊಂಡಿದೆ ಎಂದು ಆರೋಪಿಸಿದರು.
ಕಾನೂನು ಅಸ್ತ್ರ ಪ್ರಯೋಗಿಸಬೇಕು
ಮೈಸೂರಿನ ಪರಿಸರಕ್ಕಾಗಿ ನಾವು ಸಂಸ್ಥೆ ಅಧ್ಯಕ್ಷ ಪರಶುರಾಮೇಗೌಡ, ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಯನ್ನು ಬೀದಿಗಿಳಿದು ಹೋರಾಟ ನಡೆಸಿದರೆ ನಿಲ್ಲಿಸಲಾಗಲ್ಲ. ಕಾನೂನಿನ ಅಸ್ತ್ರ ಪ್ರಯೋಗಿಸುವುದರಿಂದ ಮಾತ್ರ ಯೋಜನೆಯನ್ನು ತಡೆದು ನಿಲ್ಲಿಸಲು ಸಾಧ್ಯ. ಕಾವೇರಿ ನದಿ ಕೈಗಾರಿಕಾ ತ್ಯಾಜ್ಯ, ಚರಂಡಿ ನೀರಿನಿಂದ ಸಂಪೂರ್ಣ ಕಲುಷಿತಗೊಂಡಿವೆ. ಕುಡಿಯುವುದಕ್ಕೂ ಯೋಗ್ಯವಾಗಿಲ್ಲದಷ್ಟು ಕೊಳಕಾಗಿದೆ. ಅದನ್ನು ಸ್ವಚ್ಛಗೊಳಿಸದೆ ಕೊಳಕು ನೀರಿಗೆ ಆರತಿ ಮಾಡುವುದರಿಂದ ಪುಣ್ಯ ಸಿಗುವುದಾದರೂ ಹೇಗೆ ಎಂದು ವ್ಯಂಗ್ಯವಾಡಿದರು.
ಸರ್ಕಾರಕ್ಕೆ ಮನರಂಜನಾ ಪಾರ್ಕ್ ಬೇಕು. ರೈತರಿಗೆ ಕೃಷಿ ಬೇಕಿದೆ
ಅಮ್ಯೂಸ್ಮೆಂಟ್ ಪಾರ್ಕ್ಗೆ ಖರ್ಚು ಮಾಡುವ ₹2,663 ಕೋಟಿ ಹಣವನ್ನು ನದಿ ನೀರಿನ ಸ್ವಚ್ಛತೆಗೆ ಬಳಸಿದ್ದರೆ ಜನೋಪಕಾರಿಯಾಗುತ್ತದೆ. ಆದರೆ, ಸರ್ಕಾರಕ್ಕೆ ಮನರಂಜನಾ ಪಾರ್ಕ್ ಬೇಕು. ರೈತರಿಗೆ ಕೃಷಿ ಬೇಕಿದೆ. ಅದಕ್ಕಾಗಿ ಜಿಲ್ಲೆಯ ಜನರನ್ನು ಮೊದಲು ಜಾಗೃತಿಗೊಳಿಸಬೇಕು. ಇದರ ವಿರುದ್ಧ ದೊಡ್ಡ ಹೋರಾಟವೆ ನಡೆಯಬೇಕು. ನಮ್ಮ ವಕೀಲರಿಗೆ ಇದೆಲ್ಲದರ ದಾಖಲೆಗಳನ್ನು ನೀಡಿ ನ್ಯಾಯಾಧೀಶರಿಗೆ ಮನವರಿಗೆ ಮಾಡಿಕೊಡಬೇಕು ಎಂದರು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಗಂಗಾರತಿ ಮಾಡುವ ರೀತಿಯಲ್ಲಿಯೇ ಕಾವೇರಿ ಆರತಿ ಮಾಡಲು ಹೊರಟಿದ್ದಾರೆ, ಆಗ ಡಿಸ್ನಿಲ್ಯಾಂಡ್ ಅಂದವರು ಈಗ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಎನ್ನುತ್ತಿದ್ದಾರೆ, ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುವ ಹಾಗೂ ಅಣೆಕಟ್ಟೆಗೆ ಅಪಾಯ ತಂದೊಡ್ಡುವ ಕೆಲಸಗಳನ್ನು ಸರ್ಕಾರ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಸಭೆಯಲ್ಲಿ ವಿವಿಧ ಸಂಘಟನೆಯ ಕೆ.ಬಿ.ಶಿವಲಿಂಗಯ್ಯ, ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಎಚ್.ಸಿ.ಮಂಜುನಾಥ್, ಕುಸುಮಾ, ಎಂ.ವಿ.ಕೃಷ್ಣ, ಕೆ.ವಿ.ಯಶೋದಾ ರಾಜಣ್ಣ, ಸಾತನೂರು ವೇಣುಗೋಪಾಲ್, ಅಂಬುಜಮ್ಮ, ಹಲ್ಲೇಗೆರೆ ಹರೀಶ್ ಭಾಗವಹಿಸಿದ್ದರು.




