ಸೈನಿಕ ಹುದ್ದೆ ಬಹಳ ಶ್ರೇಷ್ಟವಾಗಿದ್ದು, ಅದು ಎಲ್ಲರಿಗೂ ಲಭಿಸುವುದಿಲ್ಲ, ಕೆಲವೇ ಮಂದಿಗಷ್ಟೇ ಆದ್ಯತೆ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದರು.
ಮಂಡ್ಯ ನಗರದ ಬಾಲಭವನದಲ್ಲಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಆಗಮಿಸಿದ ಸಿಆರ್ ಪಿ ಎಫ್ ನ ಇನ್ಸ್ ಪೆಕ್ಟರ್ ಪಿ .ಎನ್. ರಮೇಶ್ ಅವರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು .
ಕೆಲವೇ ಮಂದಿಗಷ್ಟೇ ಭಾರತೀಯ ಸೇನೆಯಲ್ಲಿ ಸೇರಲು ಅವಕಾಶ ದೊರೆಯುತ್ತದೆ. ಅಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು 37 ವರ್ಷಗಳ ಕಾಲ ಸೇನೆಯಲ್ಲಿ ಪಿ ಎನ್ ರಮೇಶ್ ಅವರು ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದಾರೆ. ಇವರ ಮಾರ್ಗದರ್ಶನವನ್ನು ಇಂದಿನ ಯುವಕರು ಪಡೆದು ಸೇನೆಯಲ್ಲಿ ಹೆಚ್ಚು ಹೆಚ್ಚು ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದರು.

ನಿವೃತ್ತ ಯೋಧ ಪಿ.ಎನ್. ರಮೇಶ್ ಮಾತನಾಡಿ,ನಾನು ಭಾರತೀಯ ಸೇನೆಗೆ ನೇಮಕವಾದ ನಂತರ ಬಿಹಾರ್ ನಲ್ಲಿ ತರಬೇತಿ ಪಡೆದು ಪಂಜಾಬ್,ಛತ್ತೀಸ್ ಘಡ,ಜಮ್ಮು ಕಾಶ್ಮೀರ. ತ್ರಿಪುರ. ಅಸ್ಸಾಂ, ಬೆಂಗಳೂರು, ಉತ್ತರಪ್ರದೇಶ, ಕೊಯಮತ್ತೂರು ಸೇರಿದಂತೆ ದೇಶದ ಹಲವು ಭಾಗದಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿದ್ದೇನೆ. ನನ್ನ ಸ್ವಾಗತಕ್ಕೆ ನಮ್ಮ ಗ್ರಾಮದವರು, ಮಾಜಿ ಸೈನಿಕರು,ದೇಶಭಕ್ತರು ಸೇರಿ ಭವ್ಯ ಸ್ವಾಗತ ಕೋರಿರುವುದು ನನಗೆ ಬಹಳ ಸಂತಸ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಗಣ್ಯರು ಗಿಡ ನೆಟ್ಟು ನೀರನ್ನು ಹಾಕುವ ಮೂಲಕ ಪರಿಸರ ಪ್ರೇಮ ಮೆರೆದರು.
ನಂತರ ನಿವೃತ್ತ ಯೋಧ ರಮೇಶ್ ಅವರನ್ನು ಬೈಕ್ ರ‌್ಯಾಲಿ ಮೂಲಕ ಅವರ ಸ್ವಗ್ರಾಮ ಮರುಕಾಡು ದೊಡ್ಡಿಗೆ ಕರೆತಂದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗಣ್ಯರು ಅವರಿಗೆ ಪುಷ್ಪವೃಷ್ಟಿಗೆರೆದು ಹೂಮಾಲೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಸಿ.ಉಮೇಶ್, ಬಿ. ಸಿದ್ದರಾಜು, ಚೆಲುವಪ್ಪ, ಧನಂಜಯ್, ನಾಗೇಶ್,ಯೋಗೇಶ್, ಅಂಗಡಿ ಸ್ವಾಮಿ, ಗುರುಮೂರ್ತಿ, ವೇಲು, ಆನಂದ್, ಪುನೀತ್, ರಾಘು, ಗಂಗಾಧರ್ ಸೇರಿದಂತೆ ಹಲವರು ಭಾಗವಹಿಸಿದ್ದರು.




