ಉದ್ಯೋಗ ಖಾತ್ರಿಯಡಿ ಕೆಲಸ, ನಿರುದ್ಯೋಗ ಭತ್ಯೆ, ಸ್ಮಶಾನ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿವರೆಗೂ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.

ಮಳವಳ್ಳಿ, ಕೆ.ಆರ್.ಪೇಟೆ, ಮದ್ದೂರು ತಾಲ್ಲೂಕುಗಳಲ್ಲಿ ಕೆಲಸ ನೀಡಿರುವ ಗ್ರಾಮ ಪಂಚಾಯಿತಿಗಳಲ್ಲಿ ಇಂದಿನಿಂದ ಕನಿಷ್ಠ ಒಂದೂವರೆ ತಿಂಗಳಾದರೂ ಕೆಲಸ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಕೂಲಿಯನ್ನು ಬಿಡುಗಡೆ ಮಾಡಬೇಕು. ಕಾಯಕಬಂಧುಗಳಿಗೆ ಗುರುತಿನ ಚೀಟಿ ನೀಡಿ ಕೆಲಸದ ಸ್ಥಳಕ್ಕೆ ಬೇಕಾಗಿರುವ ಟೇಪು, ಬ್ಯಾಗ್, ಮೊಬೈಲ್ ಮತ್ತು ಕೆಲಸ ನಿರ್ವಹಿಸುವ ಕೂಲಿಕಾರರ ಕೈಗಳಿಗೆ ಗ್ಲೌಸ್, ಶೂ, ಸಾಕ್ಸ್ ನೀಡಿ ಕೆಲಸದಲ್ಲಿ ಸ್ಥಳದಲ್ಲಿ ಆಗುವ ಅನಾಹುತ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಸಿಇಒ ಕ್ಷಮೆ ಒತ್ತಾಯ
ಸ್ಥಳಕ್ಕೆ ಬಂದ ಜಿ.ಪಂ.ಸಿಇಒ ಕೆ.ಆರ್.ನಂದಿನಿ ಅವರು ಪ್ರತಿಭಟನಾಗಾರರಿಗೆ ಏಕವಚನದಲ್ಲಿ ನಿಂದಿಸಿದ್ದಾರೆ, ನಾವು ಎಷ್ಟೋ ಸಿಇಒಗಳನ್ನ ನೋಡಿದ್ದೇವೆ, ಪೊಲೀಸರ ಸಮ್ಮುಖದಲ್ಲಿಯೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಮಾತನ್ನಾಡಿರುವ ಇವರು ನಮ್ಮೆಲ್ಲರ ಕ್ಷಮೆ ಕೇಳುವವರೆಗೂ ನಾವು ಜಗ್ಗುವುದಿಲ್ಲ, ಪ್ರತಿಭಟನೆಯನ್ನು ಆಹೋರಾತ್ರಿ ಮುಂದುವರಿಸುತ್ತೇವೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಎಚ್ಚರಿಕೆ ನೀಡಿದರು.
ಪಿಡಿಒ ಮತ್ತು ಇತರೆ ಪ್ರಮುಖ ಸಿಬ್ಬಂದಿಯು ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕೆಂದು ಆದೇಶವಿದ್ದರೂ ವಾಸ ಮಾಡುತ್ತಿಲ್ಲ. ಒಂದೇ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸಿ ಮೂರು ವರ್ಷ ತುಂಬಿರುವ ಪಿಡಿಒಗಳನ್ನು ಮುಂದುವರಿಸಬಾರದೆಂಬ ಆದೇಶವಿದ್ದರೂ ಹತ್ತು ವರ್ಷಗಳಾದರೂ ಒಂದೇ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತುರ್ತಾಗಿ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಕಡಿತ ಮಾಡಿರುವ ಸಲರಕರಣೆ ವೆಚ್ಚವನ್ನು ಪುನರ್ಪ್ರಾರಂಭಿಸಬೇಕು. ಇಲ್ಲವಾದರೆ ಸಲಕರಣೆಗಳನ್ನು ಪಂಚಾಯಿತಿಗಳಿಂದಲೇ ಸರಬರಾಜು ಮಾಡಬೇಕು. ನಾಮಫಲಕ ಹಾಕಿರುವ ಸ್ಥಳದಲ್ಲಿ ಫೋಟೋ ತೆಗೆಯುವುದನ್ನು ಕೈಬಿಟ್ಟು ಕಾಮಗಾರಿ ನಿರ್ವಹಿಸುವ ಸ್ಥಳದಲ್ಲಿ ಫೋಟೋ ತೆಗೆಯಬೇಕು. ನಾಮಫಲಕವನ್ನು ಪಂಚಾಯಿತಿಯಿಂದಲೇ ಹಾಕಬೇಕು. ಕಾಯಕಬಂಧುಗಳಿಂದ ಅಳವಡಿಸಿರುವ ನಾಮಫಲಕದ ವೆಚ್ಚವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೂಸಿನ ಮನೆಯ ಅದರ ಮಹತ್ವವನ್ನು ಕಳೆದುಕೊಂಡಿದ್ದು ಮಕ್ಕಳು ಹಾಜರಾಗದೇ ಕೂಲಿ ಪಾವತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಜಿಲ್ಲೆಯಾದ್ಯಂತ ತನಿಖೆಗೆ ಒಳಪಡಿಸಿ ಸ್ಥಗಿತಗೊಳಿಸಬೇಕು. ತಾಂತ್ರಿಕಗೊಂಡ ಹಾಜರಾತಿಗೆ ಸೀಮಿತಗೊಂಡಿರುವ ರೋಜ್ಗಾರ್ ದಿವಸವನ್ನು ಸಮರ್ಪಕಗೊಳಿಸಬೇಕು. ಉದ್ಯೋಗ ಖಾತ್ರಿ ಕೆಲಸದಲ್ಲಿ ಯಂತ್ರದ ಹಾವಳಿಯನ್ನು ತಪ್ಪಿಸಿ ಬಲಾಢ್ಯರ ಮಧ್ಯ ಪ್ರವೇಶಕ್ಕೆ ಅವಕಾಸ ನೀಡದೇ ಕೂಲಿಕಾರರಿಗೆ ಸಮರ್ಪಕವಾಗಿ ಕೆಲಸ ನೀಡಬೇಕು ಎಂದು ಆಗ್ರಹ ಪಡಿಸಿದರು.
ಜಿಲ್ಲೆಯಲ್ಲಿ 30 ವರ್ಷಗಳಿಂದ ಬಡವರಿಗೆ ನಿವೇಶನ ನೀಡಿಲ್ಲ, ಪಂಚಾಯಿತಿಗಳಿಗೆ ಅರ್ಜಿ ಕೊಡುತ್ತಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ. ನೂರಾರು ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಇರುವ ಸ್ಮಶಾನ ಸ್ಥಳವನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಶವಸಂಸ್ಕಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ಸ್ಮಶಾನ ಸ್ಥಳ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾ ಘಟಕದ ಅಧ್ಯಕ್ಷ ಶಿವಮಲ್ಲಯ್ಯ, ಮುಖಂಡರಾದ ಬಿ.ಹನುಮೇಶ್, ಅಮಾವಸಯ್ಯ, ಟಿ.ಪಿ.ಅರುಣ್ಕುಮಾರ್, ಜಿ.ಎಚ್.ಗಿರೀಶ್, ಲಕ್ಷ್ಮಿ ಗೊಲ್ಲರಹಳ್ಳಿ, ಟಿ.ಎಚ್.ಆನಂದ್, ಲಕ್ಷ್ಮೀ ಕುಂತೂರು, ಅಬ್ದುಲ್ಲಾ, ಸರೋಜಮ್ಮ, ಬಸವರಾಜು, ಗೋಪಾಲ್, ಸುರೇಂದ್ರ ಭಾಗವಹಿಸಿದ್ದರು.




