Tuesday, April 30, 2024

ಪ್ರಾಯೋಗಿಕ ಆವೃತ್ತಿ

WFI ವಿವಾದ| ಬಜರಂಗ್ ಪುನಿಯಾ ಸೇರಿ ಕುಸ್ತಿಪಟುಗಳ ಜೊತೆ ರಾಹುಲ್‌ ಗಾಂಧಿ ಮಾತುಕತೆ

ಭಾರತದ ಕುಸ್ತಿ ಫೆಡರೇಶನ್ ವಿವಾದದ ಮಧ್ಯೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದು ಬೆಳಿಗ್ಗೆ ಬಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಹರ್ಯಾಣದ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮದ ಅಖಾರಾಕ್ಕೆ ಭೇಟಿ ನೀಡಿ ಬಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳ ಗುಂಪನ್ನು ಭೇಟಿ ಮಾಡಿ ಅವರ ಜೊತೆಯಲ್ಲಿ ಮಾತುಕತೆಯನ್ನು ನಡೆಸಿದ್ದಾರೆ.

ಇದಕ್ಕೂ ಮೊದಲು ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಅವರ ನಿವಾಸಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭೇಟಿ ನೀಡಿ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು.

ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಭಾಗವಾಗಿ ತನ್ನ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಕುಸ್ತಿಪಟು ವಿನೇಶ್ ಫೋಗಟ್ ನಿನ್ನೆ ಘೋಷಿಸಿದ್ದರು. ಕುಸ್ತಿಪಟುಗಳು ನ್ಯಾಯಕ್ಕಾಗಿ ಹೋರಾಡುತ್ತಿರುವಾಗ ಅಂತಹ ಗೌರವಗಳು ಅರ್ಥಹೀನವಾಗುತ್ತವೆ ಎಂದು ಹೇಳಿದ್ದರು.

“>

ಡಿ.21ರಂದು ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಈ ಹಿಂದೆ ಅಧ್ಯಕ್ಷರಾಗಿದ್ದ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌  ಆಪ್ತ ಸಂಜಯ್ ಸಿಂಗ್ ಆಯ್ಕೆಯಾದ ನಂತರ ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ಮತ್ತೊಬ್ಬ ಕುಸ್ತಿಪಟು ಬಜರಂಗ್ ಪೂನಿಯಾ ತನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಇನ್ನೋರ್ವ ಕುಸ್ತಿಪಟು ವಿರೇಂದರ್ ಸಿಂಗ್ ಕೂಡ ತನ್ನ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುತ್ತೇನೆ ಎಂದಿದ್ದರು. ಈ ಬೆನ್ನಲ್ಲೇ ವಿನೇಶ್ ಫೋಗಟ್ ಕೂಡ ಪ್ರಶಸ್ತಿ ಮರಳಿಸುವ ಘೋಷಣೆ ಮಾಡಿದ್ದರು.

ಬ್ರಿಜ್ ಭೂಷಣ್ ವಿರುದ್ಧ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಈ ವರ್ಷದ ಆರಂಭದಲ್ಲಿ ಜಂತರ್ ಮಂತರ್‌ನಲ್ಲಿ 40 ರಿಂದ 50 ದಿನಗಳ ಕಾಲ ಧರಣಿ ನಡೆಸಿದರೂ, ಕೇಂದ್ರ ಸರ್ಕಾರವು ಯಾವುದೇ ಚರ್ಚೆ ನಡೆಸಿರಲಿಲ್ಲ. ಬ್ರಿಜ್​ ಭೂಷಣ್​ ವಿರುದ್ಧ ಕ್ರಮವೂ ಕೈಗೊಂಡಿರಲಿಲ್ಲ. ಕೇಂದ್ರ ಸರ್ಕಾರದಿಂದ ಯಾವುದೇ ಭರವಸೆ, ಆಶ್ವಾಸನೆ ಸಿಗದೆ ಕುಪಿತಗೊಂಡ ಪ್ರತಿಭಟನಾಕಾರರು, ನೂತನ ಸಂಸತ್​ ಭವನ ಉದ್ಘಾಟನೆ ಸಂದರ್ಭದಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಇದಲ್ಲದೆ ದೆಹಲಿ ಪೊಲೀಸರು ಪ್ರತಿಭಟನೆ ವೇಳೆ ಕುಸ್ತಿಪಟುಗಳ ಜೊತೆ  ಅಮಾನುಷವಾಗಿ ವರ್ತಿಸಿದ್ದರು.  ಇದು ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕ್ರೀಡಾ ಪ್ರೇಮಿಗಳಿಂದ ಆಕ್ರೋಶವೂ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ತಿರುಗಿ ಬಿದ್ದಿತ್ತು. ಇದರಿಂದ ಕೇಂದ್ರ ಸರ್ಕಾರವು ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಆ ಬಳಿಕ  ಪ್ರಕರಣದಲ್ಲ ಸುಪ್ರೀಂಕೋರ್ಟ್‌ ಮಧ್ಯಸ್ಥಿಕ ಬಳಿಕ ಬ್ರಿಜ್ ಭೂಷಣ್ ವಿರುದ್ಧ  ದೆಹಲಿ ಪೊಲೀಸರು  ಪೋಕ್ಸೊ ಸೇರಿದಂತೆ ವಿವಿಧ ಸೆಕ್ಸನ್‌ಗಳಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!