ಮಂಡ್ಯ ಜಿಲ್ಲೆಯು 2015 ರಿಂದ ತಲಾದಾಯದಲ್ಲಿ ರಾಜ್ಯ ಇತರೆ 24 ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮುಂದಿದೆ, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ವನ್ನು ಅಭಿವೃದ್ಧಿ ಮಾನದಂಡವಾಗಿ ನೋಡಬೇಕಾಗಿಲ್ಲ, ಆದರೆ ಮಾನವ ಅಭಿವೃದ್ಧಿ ಸೂಚ್ಯಂಕ ದಲ್ಲಿಯೂ ಸಹ ಮಂಡ್ಯ ಜಿಲ್ಲೆಯು ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ, ಹಾಗಾಗಿ ಮಂಡ್ಯ ಹೆಚ್ಚು ನಗರೀಕರಣಗೊಳ್ಳದೆಯೋ ಅಭಿವೃದ್ದಿ ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಆಶಾ ಕಿಸಾನ್ ಸ್ವರಾಜ್ ವೇದಿಕೆಯ ಸಂಚಾಲಕಿ ಕವಿತಾ ಕುರುಗಂಟಿ ತಿಳಿಸಿದರು.
ಮಂಡ್ಯ ನಗರದ ಕೆವಿ ಶಂಕರೇಗೌಡ ಸಭಾಂಗಣದಲ್ಲಿ ನಡೆದ ‘ಗ್ರಾಮೀಣ ಮತ್ತು ಕೃಷಿ ಪ್ರಧಾನವಾದ ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ’ ಎಂಬ ವಿಚಾರಗೋಷ್ಠಿಯಲ್ಲಿ ‘ಕೃಷಿ ಪ್ರಧಾನವಾದ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯುಳ್ಳ ಪ್ರದೇಶದಲ್ಲಿ ಸುಸ್ಥಿರ ಆದಾಯ ವೃದ್ಧಿಗೆ ಇರುವ ಸಾಧ್ಯತೆಗಳು’ ಕುರಿತು ವಿಚಾರ ಮಂಡನೆ ಮಾಡಿದರು.
ಕೃಷಿ, ಶಿಕ್ಷಣ ಆರೋಗ್ಯ ಎಲ್ಲಾ ವಿಚಾರದಲ್ಲಿಯೂ ಕೂಡ ಗ್ರಾಮೀಣ ಭಾಗವನ್ನು ಹೊಂದಿರುವ ಜಿಲ್ಲೆಯೇ ಮುಂದಿದೆ. ನಗರೀಕರಣ ರಾಜಕಾರಿಣಿಗಳ ಒಂದು ಅಸ್ತ್ರ ಅಷ್ಟೇ, ರಾಜಕೀಯ ಬಂಡವಾಳವಾಗಿ ನಗರ ಪ್ರದೇಶಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದುದರಿಂದ ನಗರೀಕರಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅದು ಶೇಕಡಾ 17 ರಷ್ಟು ಆಗುತ್ತಿದೆ, ಈ ಬಗ್ಗೆ ಗಮನ ಹರಿಸದೆ ಕೃಷಿಯಲ್ಲಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.

ರಾಜ್ಯದ ಜನಸಂಖ್ಯೆ ಸರಾಸರಿಯಲ್ಲಿ ಶೇಕಡಾ 38.57 ನಗರ ಪ್ರದೇಶ ಹಾಗೂ ಶೇಕಡಾ 61.43 ರಷ್ಟು ಗ್ರಾಮೀಣ ಪ್ರದೇಶವಿದೆ. ಇನ್ನು ಮಂಡ್ಯದಲ್ಲಿ ಶೇಕಡಾ 17.08 ರಷ್ಟಿದ್ದು, ಶೇಕಡಾ 82.92 ರಷ್ಟು ಗ್ರಾಮೀಣ ಪ್ರದೇಶವಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಗರೀಕರಣ ತುಂಬಾ ಕಡಿಮೆ ಇದೆ. ಆದರೆ ನಗರೀಕರಣವಾದರೆ ಮಾತ್ರ ಅಭಿವೃದ್ಧಿ ನ ಒಂದು ವೇಳೆ ನಗರೀಕರಣವಾದರೆ ಯಾವ ರೀತಿಯಲ್ಲಿ ಆಗಬೇಕು ಎಂಬುದು ಬಹು ಮುಖ್ಯವಾದ ಅಂಶ ಎಂದರು.
ಮಂಡ್ಯದಲ್ಲಿ ಭೂಮಿ ಹಿಡುವಳಿ ಏಕ ಪ್ರಕಾರವಾಗಿದೆ, ಶೇಕಡ 95ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. ಜಿಲ್ಲೆಯಲ್ಲಿ ಶೇಕಡಾ 67ರಷ್ಟು ಮಾತ್ರ ನೀರಾವರಿ ಪ್ರದೇಶವಾಗಿದೆ. ಅಮೆರಿಕ ಶೇಕಡಾ 15ರಷ್ಟು ನೀರಾವರಿ ಭೂಮಿಯನ್ನು ಮಾತ್ರ ಹೊಂದಿದ್ದು, ಅಭಿವೃದ್ದಿ ಸಾಧಿಸಲು ಸಾಧ್ಯವಾಗಿದೆ ಎಂದರೆ, ಮಂಡ್ಯ ಏಕೆ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಮುಂದಿಟ್ಟರು.
ಮಂಡ್ಯ ನೀರಾವರಿ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬರುವುದು ಕೇವಲ ಕಾವೇರಿ ವಿಷಯ ಬಂದಾಗ ಮಾತ್ರ. ನೀರು ಸಮಸ್ಯೆಯಿಂದಲ್ಲ. ಇನ್ನು ಕೃಷಿ ಮಾಡುವ ಜಮೀನನ್ನು ಅತಿಯಾದ ರಸಾಯನಿಕ ಗೊಬ್ಬರ ಬಳಕೆಯಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದನ್ನು ತಡೆಗಟ್ಟಿ ಮತ್ತೇ ಭೂಮಿ ಫಲವತ್ತತೆ ಹೆಚ್ಚಿಸಲು ಕ್ರಮವಹಿಸಬೇಕಾಗಿದೆ. ಅದಷ್ಟು ನೈಸರ್ಗಿಕ ಕೃಷಿಯತ್ತೆ ಹೊರಳಬೇಕಾಗಿದೆ ಎಂದರು.
ಕೃಷಿಗಿಂತ ಹೆಚ್ಚು ಸಮಸ್ಯೆ ಇರುವ ಮತ್ತೊಂದು ಕ್ಷೇತ್ರವಿಲ್ಲ. ಹಾಗೆಯೇ ಸಮಸ್ಯೆ ಇಲ್ಲದ ಕ್ಷೇತ್ರಗಳು ಇಲ್ಲ, ಬೇರೆ ಕ್ಷೇತ್ರಗಳಲ್ಲಿ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುವ ರೀತಿಯಲ್ಲಿ ಕೃಷಿಯಲ್ಲಿಯಲ್ಲಿಯೂ ಸಹ ಸಮಸ್ಯೆಗಳ ಅವಲೋಕನ ಆಗಬೇಕು, ಕೃಷಿಯನ್ನು ಆದಾಯ ಬರುವ ಕ್ಷೇತ್ರವನ್ನಾಗಿ ಮಾಡಿಕೊಳ್ಳಲು, ವಾತಾವರಣ, ಆದಾಯ, ಅವಶ್ಯಕತೆ, ನಷ್ಟ ಎಲ್ಲದರ ಬಗ್ಗೆಯೂ ವ್ಯವಸ್ಥಿತ ಚಿಂತನೆ ನಡೆಯಬೇಕು. ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಮಂಡ್ಯದಲ್ಲಿನ ಕೃಷಿ ಬೆಳೆಗಳ ಇಳುವರಿ ಕಡಿಮೆಯಾಗಿದೆ. ಭತ್ತ, ಕಬ್ಬು ಸೇರಿದಂತೆ ಇತರೇ ಬೆಳೆಗಳ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದ್ದು ಇದಕ್ಕೆ ಮುಖ್ಯ ಕಾರಣವೇ ಇಲ್ಲಿನ ಕಲುಷಿತ ಹಾಗೂ ನೈಟ್ರೇಟ್ ನಂತಹ ಅಂಶವೊಂದಿರುವ ನೀರು. ಇದಲ್ಲದೆ 0.3 ರಷ್ಟು ಫಲವತ್ತತೆ ಕಡಿಮೆಯಾಗಿದೆ. ಶೇಕಡಾ 67 ರಷ್ಟು ನೀರಾವರಿ ಹೊಂದಿರುವ ಜಿಲ್ಲೆಯಲ್ಲಿ ಮರುಭೂಮಿಯಲ್ಲಿ ಇರುವಂತಹ ಕಳಪೆ ಫಲವತ್ತತೆ ಇದೆ ಎಂದರೆ ಎಷ್ಟರ ಮಟ್ಟಿಗೆ ಭೂಮಿ ರಾಸಾಯನಿಕಗಳಿಂದ ಕಲುಷಿತವಾಗಿದೆ ಎಂಬುದನ್ನು ಚಿಂತಿಸಬೇಕು. ಕೃಷಿ ಇಲಾಖೆಯಂತಹ ಇಲಾಖೆಗಳ ಸಹಕಾರ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಫಲವತ್ತತೆ ಕಳೆದುಕೊಳ್ಳುತ್ತಿರುವ ಭೂಮಿಯ ಮರುಸ್ಥಾಪನೆಗೆ ನೈಸರ್ಗಿಕ ಕೃಷಿಯತ್ತ ರೈತರು ಮುಖ ಮಾಡಬೇಕು. ಕೃಷಿಯಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಮಾನವರಲ್ಲಿಯೂ ಸಹ ಬಂಜೆತನ ಹೆಚ್ಚಾಗುತ್ತಿದೆ. ಈ ರೀತಿಯ ಅನೇಕ ಸಮಸ್ಯೆಗಳನ್ನು ಜನ ಸಾಮಾನ್ಯರು ಸಹ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ರೈತರು ಮಿಶ್ರ ಬೇಸಾಯ ಪದ್ಧತಿಗೆ ರೈತರು ಒತ್ತು ನೀಡಬೇಕು, ಆಯಾ ರೀತಿ ಮಾಡಿದಾಗ ಮಾತ್ರ ಫಲವತ್ತತೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.
ಜಾಗೃತ ಕರ್ನಾಟಕ ಅರಿವು ಮೂಡಿಸುತ್ತಿದೆ
ಜಾಗೃತ ಕರ್ನಾಟಕವು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳಿಗೆ ಅವಶ್ಯಕತೆ ಇರುವಂತಹ ಪ್ರಜಾತಾಂತ್ರಿಕ ವ್ಯವಸ್ಥೆಯ ಪೂರಕವಾಗಿ ಅರಿವು ಮೂಡಿಸುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ರಾಜ್ಯ ಸರ್ಕಾರಗಳು ಸ್ಥಳೀಯ ಪ್ರಜಾ ತಾಂತ್ರಿಕತೆಯ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ವಿವಿಧ ಕ್ಷೇತ್ರಗಳ ವಿರುದ್ಧವಾಗಿದೆ. ಅದರ ಬದಲಿಗೆ ಕೃಷಿಯ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಪೂರಕವಾಗಿ ಅಭಿವೃದ್ಧಿ ಮಾಡಬೇಕು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕೃಷಿ ವಿಚಾರವಾಗಿ ಮುಂದಾಲೋಚನೆ ಯೋಜನೆಗಳನ್ನು ಸರ್ಕಾರ ತರಬೇಕು ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾರ್ಯಕ್ಕೆ ಮೆಚ್ಚುಗೆ
ಅಬ್ದುಲ್ ಕಲಾಂರ ಆಶಯದಂತೆ PUARA ( provaiding urban amenities in rural areas) ಎಲ್ಲೆಡೆ ಕಾರ್ಯರೂಪಕ್ಕೆ ಬರಬೇಕು. ಅದನ್ನು ಪಾಂಡವಪುರ ತಾಲೂಕಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು 6 ಪಂಚಾಯಿತಿ ಗಳಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ. ಅದು ಮಂಡ್ಯ ಜಿಲ್ಲೆಯಾದ್ಯಂತ ಆಗಬೇಕು. ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಪರಿಹಾರ ಆಗಬೇಕೆ ಹೊರತು ವರ್ಷಕ್ಕೆ ಒಂದು ಬಾರಿ ವಿಕಾಸಸೌಧಕ್ಕೆ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ಯೆಗಳಿರುವ ಅರ್ಜಿಗಳನ್ನು ಪಡೆದು ಸುಮ್ಮನಾದರೆ ಪರಿಹಾರ ಸಾದ್ಯವಿಲ್ಲ. ಇದರ ಜೊತೆಗೆ ರೈತರ ಕೃಷಿ ಆಂದೋಲನಗಳು ಹೆಚ್ಚು ಹೆಚ್ಚು ಆಗಬೇಕು ಎಂದು ಸಲಹೆ ಹೇಳಿದರು.
ಎಲ್ಲರೂ ಕೂಡ ವೃತ್ತಾಕಾರದ ಆರ್ಥಿಕತೆಯನ್ನು ಸೃಷ್ಟಿ ಮಾಡುವ ಕೆಲಸ ಮಾಡಬೇಕು. ಈ ರೀತಿಯ ಆರ್ಥಿಕತೆ ಅಳವಡಿಸಿಕೊಳ್ಳುವುದರಿಂದ ಅನಗತ್ಯವಾಗಿ ಹಣ ಪೋಲಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಜ ಕೃಷಿ, ನೈಸರ್ಗಿಕ ಕೃಷಿ ಗೆ ಹೆಚ್ಚು ಒತ್ತು ನೀಡಬೇಕು
ವಿಚಾರ ಗೋಷ್ಠಿಯಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಾಗೃತ ಕರ್ನಾಟಕದ ಮುಖಂಡ ಜಿ.ಸಂತೋಷ್ ಮಾತನಾಡಿ ವಿಚಾರಗೋಷ್ಠಿ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು, ಪ್ರತಿ ತಾಲೂಕಿನಲ್ಲಿಯೂ ಸಹ ನಡೆಯಬೇಕು. ಕೃಷಿ ವಿಚಾರವಾಗಿ ಅಸಡ್ಡೆ ಬಿಡಬೇಕು, ಸಹಜ ಕೃಷಿ, ನೈಸರ್ಗಿಕ ಕೃಷಿ ಗೆ ಹೆಚ್ಚು ಒತ್ತು ನೀಡಬೇಕು. ನೈಸರ್ಗಿಕ ಕೃಷಿ ಮಾಡಿದ್ದಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಕೂಡ ಅವಕಾಶ ನೀಡುತ್ತಿದೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು. ಸಮುದಾಯ ಹಾಗೂ ಸಂಘಟನೆಗಳ ಪಾಲ್ಗೊಳ್ಳುವಿಕೆಯಿಂದ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.
ಇದಕ್ಕೂ ಮೊದಲು ಉಪನ್ಯಾಸಕ ಜಾಗೃತ ಪೃಥ್ವಿರಾಜ್ ಬೊಪ್ಪಸಮುದ್ರ ಅವರು ಪ್ರಾಸ್ತಾವಿಕ ಮಾತನಾಡಿದರು. ಜಾಗೃತ ಕರ್ನಾಟಕದ ಕುರಿತು ಪ್ರಾಧ್ಯಾಪಕ ಡಾ. ಬಿ ಸಿ ಬಸವರಾಜು ಮಾತನಾಡಿದರು. ಪ್ರಜ್ವಲ್ ನಾಗಮಂಗಲ ಕಾರ್ಯಕ್ರಮ ನಿರ್ವಹಣೆ ಮಾಡುವರು.
ಜಾಗೃತ ಕರ್ನಾಟಕದ ಸದಸ್ಯೆ ಸೀತಾಲಕ್ಷ್ಮೀ ಅವರು ಕವಿತಾ ಕುರುಕಂಟಿ ಅವರ ಇಂಗ್ಲೀಷ್ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದರು. ಗೋಷ್ಠಿಯನ್ನು ಪತ್ರಕರ್ತ ಹಾಗೂ ಜಾಗೃತ ಕರ್ನಾಟಕದ ಸದಸ್ಯ ಎನ್. ನಾಗೇಶ್ ನಿರ್ವಹಿಸಿದರು.




