ಕೃಷಿಗಿರುವ ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಕೃಷಿಕರ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗದಂತಹ ಪರಿಸ್ಥಿತಿ ಉಂಟಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಾಮಾಜಿಕ ಪ್ರತಿಷ್ಠೆ ತಂದು ಕೊಡದೇ ಹೋದರೆ ಉಳಿವು ಅಸಾಧ್ಯ ಎಂದು ಜಾಗೃತ ಕರ್ನಾಟಕ ಸಂಚಾಲಕ ಹಾಗೂ ಈದಿನ.ಕಾಂ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಡಾ.ವಾಸು ಎಚ್.ವಿ ಅಭಿಪ್ರಾಯಪಟ್ಟರು.
ಮಂಡ್ಯನಗರ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ನಡೆದ ‘ಕೃಷಿ ಹಾಗೂ ಗ್ರಾಮ ಪ್ರಧಾನವಾಗಿರುವ ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯ’ ಎಂಬ ವಿಚಾರ ಗೋಷ್ಠಿಯಲ್ಲಿ ಅವರು ‘ಮಂಡ್ಯ ಜಿಲ್ಲೆ ಮತ್ತು ಕೃಷಿಗೆ ಇರುವ ಕೆಲವು ಸಾಧ್ಯತೆಗಳು’ ಕುರಿತು ವಿಚಾರ ಮಂಡನೆ ಮಾಡಿದರು.
ನಗರ ಪ್ರದೇಶ ಅಥವಾ ನಗರೀಕರಣವೇ ಅಭಿವೃದ್ಧಿ ಎಂದು ಕೆಲವರು ನಂಬಿಸಿದ್ದಾರೆ. ಆದರೆ ಮಂಡ್ಯ ಜಿಲ್ಲೆ ಹೆಚ್ಚು ನಗರೀಕರಣಗೊಳ್ಳದೇ ಮಾನವ ಅಭಿವೃದ್ದಿ ಸೂಚ್ಯಾಂಕದಲ್ಲಿ ಉತ್ತಮ ಸ್ಥಾನದಲ್ಲಿದೆ. ಇದನ್ನು ಅರ್ಥೈಸಿಕೊಂಡು ನಾವು ಕಾರ್ಯ ಸಾಧುವಾದ ಅಭಿವೃದ್ಧಿಯ ಮಾದರಿ ಶೋಧಿಸಬೇಕಿದೆ ಎಂದರು.

ದೇವನಹಳ್ಳಿ ರೈತ ಹೋರಾಟ 25 ವರ್ಷಗಳಲ್ಲೇ ಪ್ರಮುಖವಾದದ್ದು
ರೈತರ ಕೃಷಿ ಭೂಮಿಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಹೋರಾಟ ಇತ್ತೀಚಿನ ದಿನಗಳಲ್ಲಿ ನಡೆದ ಬಹು ಮುಖ್ಯ ಹೊರಟವಾಗಿದೆ. ಇಡೀ ಸರ್ಕಾರವೇ ತಲೆಕೆಡಿಸಿಕೊಂಡು ಕೂತು ಯಾವ ರೀತಿಯ ನಿರ್ಧಾರ ಮಾಡಬೇಕು ಏನೆಂದು ಘೋಷಣೆ ಮಾಡಬೇಕು ಎಂಬ ಮಟ್ಟಿಗೆ ತಲೆಕೆಡಿಸಿಕೊಂಡಿದೆ.
ರೈತರು ಈಗ ಗೆಲವು ಸಿಗಬಹುದು, ಆದರೆ ಮುಂದಿನ 25 ವರ್ಷಗಳಲ್ಲಿ ಈಗಿನ ಕೃಷಿ ಭೂಮಿ ಅಂದಿಗೂ ಕೂಡ ಕೃಷಿ ಭೂಮಿಯೇ ಆಗಿ ಉಳಿಯಲಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಎಲ್ಲರೂ ಸಹ ಹಾಕಿಕೊಳ್ಳಬೇಕು. ಕೃಷಿ ಭೂಮಿ ಮುಂದಿನ ದಿನಗಳಲ್ಲಿಯೂ ಕೂಡ ಕೃಷಿ ಭೂಮಿಯೇ ಆಗಿರಬೇಕು ಎಂದರೆ ಕೃಷಿಗೆ ಸಾಮಾಜಿಕ ಪ್ರತಿಷ್ಠೆ ಬರಬೇಕು ಎಂದರು.
ಮಂಡ್ಯನಗರವನ್ನು ಕೇಂದ್ರವನ್ನಾಗಿಟ್ಟುಕೊಂಡರೆ ವೃತ್ತಾಕಾರವಾಗಿ 10 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 40 ಗ್ರಾಮಗಳು ಬರುತ್ತವೆ, ಇದನ್ನು ಇನ್ನೆರಡು ಕಿ.ಮೀ. ವಿಸ್ತರಿಸಿದರೆ 106 ಗ್ರಾಮಗಳು ಬರುತ್ತವೆ. ಈ ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಉತ್ತಮವಾದ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ, ಇಂಟರ್ ನೆಟ್ ಸೇರಿದಂತೆ ಇನ್ನಿತರ ಸಂಪರ್ಕ ಸಾಧನಗಳು ಹಾಗೂ ಉದ್ಯೋಗವನ್ನು ಒದಗಿಸಿದರೆ, ಅಭಿವೃದ್ದಿ ಸಾಧ್ಯವಾಗುತ್ತದೆ, ಈ ಬಗ್ಗೆ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸಿ, ನೀತಿಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಜನರ ಸಾಮಾಜಿಕ ಮನಶಾಸ್ತ್ರದ ಬಗ್ಗೆ ಪ್ರಯೋಗಗಳು ನಡೆಯಬೇಕಿದೆ. ಹಾಗೂ ಜನರು ವಲಸೆ ಹೋಗುವುದನ್ನು ತಡೆಯುವ ಕೆಲಸ ವ್ಯವಸ್ಥಿತ ಸಂಪರ್ಕ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಶಿಕ್ಷಣ, ವಸತಿ, ಮನೋರಂಜನೆ ಹಾಗೂ ಬಹು ಮುಖ್ಯವಾಗಿ ಸ್ಥಿರ ಆದಾಯವುಳ್ಳ ಉದ್ಯೋಗ ಅಥವಾ ಆದಾಯದ ಮೂಲಗಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಈ ನಿಟ್ಟಿನಲ್ಲಿ ಕಾರ್ಯಸಾಧ್ಯ ಮಾಡಲು ಕೃಷಿ ಆಧಾರಿತವಾಗಿ ಹಾಗೂ ಮಾನವ ಅಭಿವೃದ್ಧಿ ದೃಷ್ಟಿಯಿಂದ ರಚನಾತ್ಮಕ ಕೆಲಸ, ಬೇಕಾದ ಆಂದೋಲನ ಮಾಡಬೇಕು ಹಾಗೂ ವ್ಯವಸ್ಥಿತವಾಗಿ ರಾಜಕೀಯ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ನಿಲುವುಗಳನ್ನು ತೆಗೆದುಕೊಳ್ಳುವಂತೆ ಮಾಡುವ ಬಾಬಾ ಸಾಹೇಬರು, ಮಹಾತ್ಮ ಗಾಂಧಿ ಅವರು, ಬುದ್ಧ ಬಸವಣ್ಣ ಅವರು ತೋರಿದ ಆಧ್ಯಾತ್ಮಿಕ ಚಿಂತನೆಯ ಬೀಜವನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.
ಇವೆಲ್ಲವನ್ನೂ ಮೊದಲು ಪ್ರಚಾರದ ಮೂಲಕ ಜನ ಮಾನಸದಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು, ಪ್ರಚಾರದ ವೇಳೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಾಸಿಸುವವರ ತಳ ಆದಾಯ ಹೆಚ್ಚುತ್ತದೆ, ನಗರವೆಂದರೆ ಅಭಿವೃದ್ಧಿ ಎನ್ನುವವರ ವಾದವನ್ನು ಸುಳ್ಳು ಎಂದು ಪ್ರಚಾರ ಮಾಡಬೇಕು. ನಗರಗಳಲ್ಲಿ ಸಿಗುವ ಅಗತ್ಯ ಸೌಲಭ್ಯಗಳನ್ನು ಸ್ಥಿರ ಆದಾಯದ ಮೂಲಗಳನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ವಿಚಾರ ಮಂಡಿಸಿದರು.
ಇನ್ನು ಅಭಿವೃದ್ಧಿ ನಿಟ್ಟಿನಲ್ಲಿ ಕೃಷಿಯಿಂದ ಆದಾಯ, ಕೃಷಿ ಜೊತೆಗೆ ಇತರ ಕಸುಬುಗಳಿಂದ ಬರುವ ಆದಾಯ ಹೆಚ್ಚಿಸುವುದು, ಕೃಷಿಯೇತರ ಕಸುಬುಗಳು ಅಂದರೆ ಪದಾರ್ಥಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಿ ಕೃಷಿಯಿಂದಲೇ ಕೃಷೀಗಿರುವ ಸಾಮಾಜಿಕ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಮಂಡ್ಯದಲ್ಲಿ ಅಗ್ರಿ ಟೆಕ್ ಪ್ರಾರಂಭ ಮಾಡಬೇಕು ಎಂಬ ಬಗ್ಗೆ ಪ್ರಾಮಾಣಿಕವಾಗಿ ಪ್ರಯಾಣ ಮಾಡಬೇಕಿದೆ ಎಂದರು.
ರೈತ ಹೋರಾಟಗಾರರಾದ ನಂದಿನಿ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಜಾಗೃತ ಕರ್ನಾಟಕದ ಸದಸ್ಯ ಸುಬ್ರಮಣ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.




