Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜು.13ಕ್ಕೆ ‘ಎದೆಯ ಹಣತೆ – ಮಾಯಾಮೃಗ’ ನಾಟಕಗಳ ಪ್ರದರ್ಶನ

ನಾವು ಮಂಡ್ಯ ಕಲಾವಿದರು ಮತ್ತು ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು ವತಿಯಿಂದ ಪೂರ್ಣಚಂದ್ರ ತೇಜಸ್ವಿ ಹಾಗೂ ಬಾನು ಮುಷ್ಕಾಕ್ ಅವರ ಕಥೆಗಳನ್ನಾಧರಿಸಿದ ‘ಮಾಯಾಮೃಗ – ಎದೆಯ ಹಣತೆ’ ನಾಟಕಗಳ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವು ಜು.13ರ ಭಾನುವಾರ ಸಂಜೆ 6-30ಕ್ಕೆ ಮಂಡ್ಯನಗರದ ವಿವೇಕಾನಂದ ರಂಗ ಮಂದಿರ ನಡೆಯಲಿದೆ.

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ನಾಟಕವನ್ನು ಡಾ.ಎಂ.ಗಣೇಶ ಹೆಗ್ಗೋಡು ನಿರ್ದೇಶನ ಮಾಡಿದ್ದು, ಸಲ್ಮಾದಂಡಿನ್ ವಿನ್ಯಾಸ ಮಾಡಿದ್ಧಾರೆ.

ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಮೃಗ’ ನಾಟಕವನ್ನು ರಂಜಿತ್ ಶೆಟ್ಟಿ ಕುಕ್ಕುಡೆ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ನಾಟಕ ವೀಕ್ಷಣೆ ಮಾಡುವಂತೆ ಮನವಿ ಮಾಡಲಾಗಿದೆ.

‘ಮಾಯಾಮೃಗ’ ನಾಟಕ 
‘ಮಾಯಾಮೃಗ’ ಕಥೆಯಲ್ಲಿ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಅಸ್ತಿತ್ವ ಮತ್ತು ಭ್ರಮೆಯ ನಡುವಿನ ಎಳೆಯ ರೇಖೆಯನ್ನು ಹಾಸ್ಯಮಿಶ್ರಿತ ಶೈಲಿಯಲ್ಲಿ ಅನಾವರಣಗೊಳಿಸುತ್ತಾರೆ. ಭೂತಗಳ ಹುಡುಕಾಟಕ್ಕೆ ಸಮಿಪದ ಸ್ಮಶಾನಕ್ಕೆ ಹೋದ ಇಬ್ಬರು ಸ್ನೇಹಿತರು ಎದುರಿಸುವ ವಿಚಿತ್ರ ಘಟನೆಗಳು ಕಥೆಯ ಕೇಂದ್ರಬಿಂದು. ಈ ಮೂಲಕ ಆತಂಕ, ಅಸಕ್ತಿ ಮತ್ತು ಮಾನವನ ಕಲ್ಪನೆಗಳ ಮಿಶ್ರಣವನ್ನು ತೇಜಸ್ವಿಯವರು ಅದ್ಭುತವಾಗಿ ಚಿತ್ರಿಸುತ್ತಾರೆ. ಕತೆ ಸುಮ್ಮನೆ ಭಯ ಹುಟ್ಟಿಸುವುದಿಲ್ಲ. ಅದು ಯೋಚನೆಯ ಮೇಲೆ ಪ್ರಶ್ನೆ ಎಸೆದು, ನಿಜವೇನು? ಮಾಯೆಯೇನು? ಎ೦ಬ ಚಿಂತನೆಗೆ ಓಲೈಸುತ್ತದೆ.

ಎದೆಯ ಹಣತೆ ನಾಟಕ
ಈ ಕಥೆಯಲ್ಲಿ ಲೇಖಕಿ ಬಾನು ಮುಷ್ಕಾಕ್ ಅವರು ಹೆಣ್ಣಿನ ದುರಂತಗಳು ಮತ್ತು ಸಮಾಜದ ಹೇರಿಕೆಗಳಿಗೆ ಕನ್ನಡಿ ಹಿಡಿದಿದ್ದಾರೆ. ಮೆಹರುನ್ ತನ್ನ ಮನೆಯ ಇತರೆ ಹೆಣ್ಣು ಮಕ್ಕಳಲ್ಲಿ ಹೆಚ್ಚು ವಿದ್ಯಾವಂತೆ. ತನಗಾಗುತ್ತಿರುವ ಅನ್ಯಾಯವನ್ನು ಎದುರಿಸಬೇಕೆನ್ನುವ ವ್ಯಕ್ತಿತ್ವದ ಅರಿವಿರುವ ಹೆಣ್ಣು. ಆದರೆ ಆಕೆಯ ಪ್ರತಿಭಟನೆಯನ್ನು ಮೊದಲ ಹಂತದಲ್ಲಿಯೇ ಸಂಬಂಧಗಳ ಭಾವನಾತ್ಮಕ ಹಿನ್ನೆಲೆಯಲ್ಲಿ ಶಕ್ತವಾಗಿ ಹತ್ತಿಕ್ಕಲಾಗುತ್ತದೆ. ಗಂಡನನ್ನು ಕುರಿತ ಇವಳ ಆರೋಪಗಳನ್ನು ಯಾವ ಸಂಕೋಚವೂ ಇಲ್ಲದೆ ಒಪ್ಪಿಕೊಂಡು, ಅದು ಗಂಡಿನ ವ್ಯಕ್ತಿತ್ವದ ಮೂಲಧಾತು ಎಂಬ ಸರ್ಟಿಫಿಕೇಟನ್ನು ಕೊಟ್ಟು ಅವಳನ್ನು ವಾಪಸ್ಸು ಗಂಡನ ಮನೆಗೆ ಬಿಟ್ಟು ಬರುತ್ತಾರೆ. ಪಿ.ಯು.ಸಿ.ಯ ತನಕ ಓದಿದ ಓದು, ತನಗಾಗುತ್ತಿರುವುದು ಅನ್ಯಾಯ ಎನ್ನುವ ಸ್ಪಷ್ಟ ತಿಳುವಳಿಕೆ ಇದು ಅವಳ ಬದುಕಿನ ದುರಂತದ ಸಾಂದ್ರತೆಯನ್ನು ಇನ್ನೂ ಹೆಚ್ಚಿಸುತ್ತದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ