Friday, November 20, 2026

ಪ್ರಾಯೋಗಿಕ ಆವೃತ್ತಿ

ಅನ್ಯಾಯವಾದಾಗ ಧ್ವನಿ ಎತ್ತುತ್ತಿದ್ದ ಏಕೈಕ ವ್ಯಕ್ತಿ ಜಿ.ಮಾದೇಗೌಡ : ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ

ಕಾವೇರಿ ಹೋರಾಟ, ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆ ಉಳಿವಿನ ಹೋರಾಟಗಳು ಸೇರಿದಂತೆ ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತಿದ್ದ ಏಕೈಕ ವ್ಯಕ್ತಿ ಮಾದೇಗೌಡರು. ಇವರೊಬ್ಬ ಛಲವಾದಿಯಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯುತ್ತಿದ್ದರು. ಇವರು ನಾಲ್ಕು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಶಿಕ್ಷಣ, ಧಾರ್ಮಿಕ, ಆರೋಗ್ಯ, ಉದ್ಯೋಗವೆಂಬ ಕ್ಷೇತ್ರಗಳು ಹಳ್ಳಿಗೆಳಿಗೆ ಬೇಕಿದೆ ಎನ್ನುವುದನ್ನು ಅವರು ಕಂಡಿದ್ದರು ಎಂದು ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರತಿಪಾದಿಸಿದರು.

ಮಂಡ್ಯನಗರದ ಗಾಂಧಿಭವನದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನ, ಭಾರತೀ ಎಜುಕೇಷನ್‌ ಟ್ರಸ್ಟ್‌, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ ಸಹಯೋಗದಲ್ಲಿ ಗುರುವಾರ ನಡೆದ 25ನೇ ವರ್ಷದ ರಾಜ್ಯ ಮಟ್ಟದ ಡಾ.ಜಿ.ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತಮ ಕೆಲಸಗಳಿಗೆ ನನ್ನ ಬೆಂಬಲ : ಶಾಸಕ ರವಿಕುಮಾರ್

ಜಿ.ಮಾದೇಗೌಡ ಅವರನ್ನು ಬರಗಾಲ ಬಂದಿದ್ದರೆ ಜನರು ಪ್ರತಿ ದಿನ ನೆನೆಯುತ್ತಿದ್ದರು, ರೈತರ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಸ್‌ ಪಡೆದ ಮೇಲೆ ನಾನು ಸಹ ಮುಕ್ತನಾಗಿದ್ದೇನೆ, ಇವರ ಪುತ್ರ ಮಧು ಜಿ.ಮಾದೇಗೌಡ ಅವರು ಕೂಡ ಗಾಂಧಿ ಭವನವನ್ನು ನವೀಕರಣಗೊಳಿಸುವ ಮೂಲಕ ಮತ್ತಷ್ಟು ಭವನದ ವೈಭವ ಹೆಚ್ಚಿದೆ. ಇವರ ಉತ್ತಮ ಕೆಲಸಗಳಿಗೆ ನನ್ನ ಬೆಂಬಲ ಇರುತ್ತದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ರೈತರ ಬಾಳು ಹಸನು ಮಾಡುವ ಉದ್ದೇಶದಿಂದಲೇ ನೇರನುಡಿಯಾಡುತ್ತಿದ್ದ ಜಿ.ಮಾದೇಗೌಡರು ಬಹಳ ಮುಂಗೋಪಿಯಾಗಿದ್ದರು, ಆದರೆ ಕೋಪವಿದ್ದರೂ ದ್ವೇಷ ಇಟ್ಟುಕೊಂಡಿರದ ಅಪ್ಪಟ ಗಾಂಧಿವಾದಿಯಾಗಿದ್ದರು. ನಾಡಿನ ದೊಡ್ಡ ಚೇತನ ಜಿ.ಮಾದೇಗೌಡರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದರಲ್ಲಿ ನೆಮ್ಮದಿ ಇದೆ. ಅನೇಕ ರಾಜಕೀಯ ನಾಯಕರು ಅಕ್ಷರ ಶತೃಗಳಾಗಿದ್ದಾರೆ, ಪುಸ್ತಕಗಳನ್ನು ಕೊಟ್ಟಾಗ ಶಾಲಾ ಕಾಲೇಜುಗಳಲ್ಲಿಯೇ ಓದಿಲ್ಲ ಹಿಗೇಕೆ ಓದಬೇಕು ಎನ್ನುವ ಮನೋಭಾವ ತಾಳಿರುವ ಇಂತಹ ರಾಜಕಾರಣಿಗಳಿಂದ ನಾವು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಜಿ.ಸಿ.ಮಾಧುಸ್ವಾಮಿ ಮಾತನಾಡಿ, ಸಾಧನೆ ಮಾಡುವುದು ಸುಲಭವಲ್ಲ, ಅನೇಕ ತ್ಯಾಗ ಹಾಗೂ ಬಲಿದಾನಗಳ ಸಂಕೇತವೇ ಸಾಧನೆ ಎಂಬುದಾಗಿರುತ್ತದೆ. ಮನುಷ್ಯನಿಗೆ ಸಮಾಧಾನವಾಗುವ ನಿಟ್ಟಿನಲ್ಲಿ ಸಾಧನೆ ಇರಬೇಕು. ಸರೋಜಮ್ಮ ಎಂ.ಚಂದ್ರಶೇಖರ್‌ ಮತ್ತು ಡಾ.ಎಚ್‌.ಮಂನುನಾಥ್‌ ಅವರ ಸಾಧನೆ ಗುರುತಿಸಿ ಮಾದೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಅತ್ಯುತ್ತಮ ಕೆಲಸವಾಗಿದೆ.

ಮಂಡ್ಯ ಗಾಂಧಿ ಎನ್ನುವ ಮಾತು ಜಿ.ಮಾದೇಗೌಡರಿಗೆ ಒಗ್ಗುತ್ತದೆ. ಕಾವೇರಿ ಹೋರಾಟವೇ ಇವರಿಗೆ ಪ್ರೇರಣೆಯಾಗಿದ್ದು, ಇನ್ನೂ ಮಂಡ್ಯ ಜಿಲ್ಲೆಯಲ್ಲಿ ಹೋರಾಟ ಜೀವಂತವಾಗಿದ್ದರೆ ಮಾದೇಗೌಡರು ಹಾಕಿಕೊಟ್ಟ ಅಡಿಪಾಯವಾಗಿದೆ. ಇಂತಹ ಹಲವು ಮಹನೀಯರ ಹೊರಾಟದ ಕಿಚ್ಚು ಇರಬಹುದು, ಇದರಲ್ಲಿ ಮಾದೇಗೌಡರದ್ದು ವಿಶೇಷ ಎನಿಸುತ್ತದೆ. ರಾಜಕಾರಣಿಗಳು ಹಣ ಮಾಡುವುದರಲ್ಲೇ ನಿರತರಾಗಿರುತ್ತಾರೆ, ನಮ್ಮ ಮಾದೇಗೌಡರು ಇದಕ್ಕೆ ವಿರುದ್ಧವಾಗಿದ್ದರು ಎಂದು ತಿಳಿಸಿದರು.

ಸಮಾಜ ಸೇವಾ ಪ್ರಶಸ್ತಿಯನ್ನು ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಅಧ್ಯಕ್ಷೆ ಸರೋಜಮ್ಮ ಎಂ.ಚಂದ್ರಶೇಖರ್ ಹಾಗೂ ಸಾವಯವ ಕೃಷಿಕ ಪ್ರಶಸ್ತಿಯನ್ನು ಕುಣಿಗಲ್‌ ತಾಲ್ಲೂಕಿನ ದೊಡ್ಡಹುಸೂರಿನ ಗಾಂಧೀಜಿ ಸಹಜ ಬೇಸಾಯ ಆಶ್ರಮ ಸಂಸ್ಥಾಪಕ ಡಾ.ಎಚ್‌.ಮಂಜುನಾಥ್‌ ಅವರಿಗೆ ₹25 ಸಾವಿರ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ಎಜುಕೇಷನ್‌ ಟ್ರಸ್ಟ್‌ನ ನಂಜೇಗೌಡ, ಪ್ರಾಂಶುಪಾಲ ಮಹದೇವಸ್ವಾಮಿ, ಮುಖಂಡರ ಸಿ.ಎಂ.ಉಮೇಶ್‌ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ