ದೇವನಹಳ್ಳಿಯ ಚನ್ನರಾಪಟ್ಟಣ ಹೋಬಳಿಯ ರೈತರ ಜಮೀನು ವಶ ಪಡಿಸಕೊಳ್ಳುವ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ನಾಳೆಯ ನಿರ್ಧಾರ ರೈತರ ಪರವಾಗಿರಲಿ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆಯ ಬಿ.ಟಿ.ವಿಶ್ವನಾಥ್ ಒತ್ತಾಯಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದೃಢವಾದ, ಜನಪರ ನಿಲುವು ತೆಗೆದುಕೊಳ್ಳೂವಲ್ಲಿ ವಿಫಲವಾಗಿದ್ದು, ಬಂಡವಾಳ ಶಾಹಿಗಳ ಪರವಾಗಿಯಲ್ಲದೇ ರೈತರ ಪರವಾಗಿ ನಿಲ್ಲಬೇಕೆದರು.
೨೦೨೩ರ ಚುನಾವಣೆ ಪೂರ್ವದಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ನೋಟಿಸ್ ವಿರುದ್ಧ ಹೋರಾಟ ಮಾಡಿ, ಅಧಿಕಾರಕ್ಕೆ ಬಂದರೆ ರೈತರಿಗೆ ನೆರವಾಗುವಂತಹ ನಿರ್ಣಯ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈಗ ಮಾತಿಗೆ ತಪ್ಪುತ್ತಿದೆ. ವಿರೋಧ ಪಕ್ಷದಲ್ಲಿದ್ದಾಗ ತಾನೇ ವಿರೋಧಿಸಿದ ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ತಿದ್ದು ಪಡಿ ಕಾಯ್ದೆಗಳಲ್ಲೆಲ್ಲವನ್ನು ರದ್ದುಗೊಳಿಸದೆ ತಾನೇ ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ, ಹಾಗೂ ಜಾತಿಗಣತಿಗೆ ತಳ ಸಮುದಾಯಗಳನ್ನು ಒತ್ತಾಯಿಸುತ್ತಿದ್ದರೂ ದಿಟ್ಟ ನಿಲುವನ್ನು ತೆಗೆದುಕೊಳ್ಳದ ಕಾಂಗ್ರೆಸ್ ಸರ್ಕಾರ ಬಿಜೆಪಿ ಆಡಳಿತವನ್ನೇ ಮುಂದುವರೆಸುತ್ತಿದೆಯೋ ಎನ್ನುವ ಸಂಶಯ ಮೂಡಿಸಿದ್ದು, ಇದೀಗ ರೈತರ ಜಮೀನು ವಿಚಾರವಾಗಿ ಬಂಡವಾಳ ಶಾಹಿಗಳ ಪರವಾಗಿ ನಿಂತು ಕೇಂದ್ರದ ಬಂಡವಾಳ ಶಾಹಿ ಪರವಾದ ಸರ್ಕಾರವನ್ನೇ ಬೆಂಬಲಿಸುವಂತೆ ಕಾಣುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ಹೋರಾಟದ ತೀಕ್ಷ್ಣತೆ ರಾಜ್ಯವ್ಯಾಪಿ ಆವರಿಸುತ್ತಿದ್ದು, ರಾಷ್ಟ್ರಮಟ್ಟಕ್ಕೂ ವ್ಯಾಪಿಸಿ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಹೋರಾಟದ ಬಿಸಿ ತಟ್ಟಲಿದೆ. ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ತಪ್ಪನ್ನು ಪುನರಾವರ್ತಿಸದೇ ನಾಳೆಯ ನಿರ್ಧಾರವನ್ನು ರೈತರ ಪರವಾಗಿ ಕೈಗೊಂಡು ರೈತರಿಗೆ ನಿರಾಸೆ ತಾರದೇ ರಾಜ್ಯತೆ ಜನತೆಗೆ ಸಿಹಿ ಸುದ್ದಿ ನೀಡಲಿ ಎಂದು ಹಾರೈಸಿದರು.
ಕರ್ನಾಟಕ ಜನಶಕ್ತಿಯ ಪೂರ್ಣಿಮಾ ಮಾತನಾಡಿ 13 ಹಳ್ಳಿಗಳ ಜನರು ಭೂ ಸ್ವಾಧೀನ ವಿರೋಧಿಸಿ ಕಳೆದ 3 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ರೈತಪರವಾದ ನಿಲುವು ತಳೆಯಲು ಮೀನಾಮೇಷ ಎಣಿಸುತ್ತಿದೆ, ಇದರಿಂದ ಬಿಜೆಪಿಗಿಂತ ಕಾಂಗ್ರೆಸ್ ಭಿನ್ನವಾಗಿಲ್ಲ ಎಂಬುದು ತಿಳಿಯುತ್ತದೆ. ರೈತರು ಅನ್ನ ಬೆಳೆಯುವ ಭೂಮಿಯಲ್ಲಿ ಯುದ್ದ ಸಾಮಗ್ರಿ ಉತ್ಪಾದನೆಗೆ ಮುಂದಾಗಿರುವುದು ಸರಿಯಲ್ಲ. ಸರ್ಕಾರ ರೈತ ಪರವಾಗಿ ನಿಲ್ಲದಿದ್ದರೆ ಅದಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಶಿಲ್ಪ, ಮಂಜುನಾಥ್, ಜಯರಾಮ ಇದ್ದರು.




