ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ಆಯೋಜನೆಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಮಾಜಿ ಶಾಸಕ ಕೆ.ಅನ್ನದಾನಿ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಜರುಗಿದ ಕೆಲ ದಿನಗಳಲ್ಲೇ ನಾನು ಭ್ರಷ್ಟಾಚಾರದ ಬಗ್ಗೆ ದನಿಗೂಡಿಸಿದ್ದೆ, ಸರ್ಕಾರ ನನ್ನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಮ್ಮೇಳನದ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವೆಸಗಿ ಸ್ವೇಚಾಚಾರ ಮಾಡಲಾಗಿದೆ ಎಂದು ಆರೋಪಿಸಿದರು.
ಸುಮಾರು 500 ರೂ. ಬೆಲೆ ಬಾಳುವ ಹಣ್ಣಿನ ಬುಟ್ಟಿಗೆ 2,500 ರೂ., 900 ರೂ. ಬೆಲೆ ಬಾಳುವ ರೇಷ್ಮೆ ಸಾಲಿಗೆ 1680 ರೂ. ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ನೀಡಿರುವ ನೆನಪಿನ ಕಾಣಿಕೆಗೆ 31,500 ರೂ. ಭರಿಸಿದ್ದು, ಭ್ರಷ್ಟಾಚಾರವಲ್ಲವೇ ಎಂದು ಪ್ರಶ್ನಿಸಿದರು.
ಲೂಟಿ ಹೊಡೆಯಲು ಕಾವೇರಿ ಆರತಿ ಬೇಕೇ ?
ಕಾವೇರಿ ನದಿ ಪಾತ್ರದ ಕನ್ನಂಬಾಡಿ ಅಣೆಕಟ್ಟೆ ಬಳಿ 92 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವುದು ಹಣ ಲೂಟಿ ಮಾಡಲು ಎಂದು ಆರೋಪಿಸಿ ಮಾಜಿ ಶಾಸಕ ಅನ್ನದಾನಿಯವರು, ಕಾವೇರಿ ಆರತಿ ಬದಲು ನಾಲೆಯ ಆಧುನೀಕರಣಕ್ಕೆ ಒತ್ತು ನೀಡಲಿ ಆ ಮೂಲಕ ಮೌಢ್ಯಾಚರಣೆಗೆ ಅಂತ್ಯವಾಡಲಿ ಎಂದರು.
ಸಾಹಿತ್ಯದ ಹೆಸರಿನಲ್ಲಿ ಮಂಡ್ಯ ಜಿಲ್ಲೆಗೆ ಕಳಂಕ ತರುವ ಪ್ರಯತ್ನದಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಿ ಜಿಲ್ಲೆಯ ಮಾನ – ಮರ್ಯಾದೆಯನ್ನು ಹರಾಜು ಹಾಕಿದ್ದಾರೆಂದು ಕಿಡಿಕಾರಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ಮಾಜಿ ಶಾಸಕರು ಸಮ್ಮೇಳನ ಯಶಸ್ಸಿಗೆ ಸಹಕಾರ ನೀಡಿದ್ದೇವೆ, ಆದರೆ ಸಮ್ಮೇಳನದ ಹೆಸರಿನಲ್ಲಿ 28 ಉಪ ಸಮಿತಿಗಳನ್ನು ರಚಿಸಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು, ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಸಾರಿಗೆ, ವಸತಿ,ವೇದಿಕೆ ಮತ್ತು ಆಹಾರ ಸಮಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು, ಆಹಾರ ಮತ್ತು ವೇದಿಕೆ ಸಮಿತಿಗೆ ಸುಮಾರು ತಲಾ 8.50 ಕೋಟಿ ರೂ. ಪಾವತಿಸಲಾಗಿದೆ. ಸದರಿ ಹಣದಲ್ಲಿ ದುಪ್ಪಟ್ಟು ವಸ್ತುಗಳ ಖರೀದಿ ನಡೆಸಬಹುದಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ಅಥವಾ ಮಾಜಿ ನ್ಯಾಯಮೂರ್ತಿಗಳು, ಸಿಓಡಿ, ಇಡಿ ಅಥವಾ ಸಿಬಿಐ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಜರ್ಮನ್ ಟೆಂಟ್ ನಿರ್ಮಾಣಕ್ಕೆ ವಾಸ್ತವವಾಗಿ ಚದರ ಅಡಿಗೆ 15 ರಿಂದ 18 ರೂ. ಬಾಡಿಗೆ ಇದೆ, 68 ರೂ. ವ್ಯಯಿಸಿದರುವ ಹೊಣೆಗಾರಿಕೆಯನ್ನು ಮಳವಳ್ಳಿ ಶಾಸಕರು ಹೊರಬೇಕು ಎಂದು ಒತ್ತಾಯಿಸಿದ ಅವರು, ಒಟ್ಟಾರೆ ಸಮ್ಮೇಳನದ ಹೆಸರಿನಲ್ಲಿ 15 ರಿಂದ 20 ಕೋಟಿ ಭ್ರಷ್ಟಾಚಾರವಾಗಿದೆ ಎಂದು ತಿಳಿಸಿದರು.
ಕಸಾಪ ರಾಜ್ಯಾಧ್ಯಕ್ಷರು ಸಮ್ಮೇಳನದ ಖರ್ಚಿನ ಬಗ್ಗೆ ಲೆಕ್ಕ ನೀಡದಿರುವುದು ಖಂಡನಾರ್ಹ ಎಂದ ಅವರು, ಈ ಸಂಬಂಧ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ದೂರು ನೀಡುವ ಇಂಗಿತ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಸದಾನಂದ, ಸಾತನೂರು ಜಯರಾಂ, ಶ್ರೀಧರ್, ಹನುಮಂತು, ಪುಟ್ಟಬುದ್ದಿ, ಸಿದ್ದಾಚಾರಿ, ದೊರೆಸ್ವಾಮಿ ಇತರರಿದ್ದರು.




