ಮಂಡ್ಯ ನಗರಸಭೆ ಎರಡನೇ ಅವಧಿ ಆರಂಭವಾಗಿ 11 ತಿಂಗಳ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್ ಸದಸ್ಯ ಟಿ.ರವಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರನ್ನು ಶಾಸಕರು ಮತ್ತು ಸದಸ್ಯರು ಅಭಿನಂದಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಟಿ.ರವಿ, ನನ್ನ ಮೇಲೆ ವಿಶ್ವಾಸವಿಟ್ಟು ಈ ಸ್ಥಾನಕ್ಕೆ ಆಯ್ಕೆ ಮಾಡಿದ ಶಾಸಕ ಪಿ.ರವಿಕುಮಾರ್ ಮತ್ತು ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿಯಲ್ಲಿ ತೊಡಗುವುದಾಗಿ ಹೇಳಿದರು.

ಸದಸ್ಯ ಎಚ್.ಎಸ್.ಮಂಜು ಮಾತನಾಡಿ, ನೂತನ ಅಧ್ಯಕ್ಷರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ನಗರದೊಳಗೆ ಅಂಗಡಿಯವರು ಫುಟ್‌ಪಾತ್‌ನ್ನು ಆವರಿಸಿಕೊಂಡಿದ್ದಾರೆ, ಹೋಟೆಲ್‌ಗಳಲ್ಲಿ ಸ್ವಚ್ಛತೆ ಇಲ್ಲ, ಟ್ರೇಡ್ ಲೈಸೆನ್ಸ್ ಬಗ್ಗೆ ಅರಿವು ಮೂಡಿಸಬೇಕಿದೆ. ಅವಧಿ ಕಡಿಮೆ ಇದ್ದರೂ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ತಿಳಿಸಿದರು.
11 ತಿಂಗಳಿಂದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಖಾಲಿ ಇರುವ ವಿಷಯ ತಿಳಿದು ಶಾಸಕರೇ ಅಧ್ಯಕ್ಷರ ಆಯ್ಕೆಗೆ ಸಹಕಾರ ನೀಡಿ ಪೂರ್ಣಗೊಳಿಸಿದ್ದಾರೆ. ಈಗ ಜವಾಬ್ದಾರಿ ನಿರ್ವಹಿಸುವ ಕೆಲಸ ನಿಮ್ಮದಾಗಿದೆ ಎಂದು ಹೇಳಿದರು.
ಸ್ಥಾಯಿ ಸಮಿತಿ ಸದಸ್ಯರ ನೇಮಕ:
ನಗರಸಭೆ ಸ್ಥಾಯಿ ಸಮಿತಿ ಸದಸ್ಯರಾಗಿ ಮಂಜುಳ, ಎಂ.ಕುಮಾರ್, ಎಂ.ಆರ್. ಭಾರತೀಶ್, ಎಂ.ಎಸ್. ಮಂಜುಳ, ಎಚ್.ಎಸ್. ಪವಿತ್ರ, ಎಂ.ಎನ್. ಶ್ರೀಧರ್, ಸಿ.ಕೆ. ರಜಿನಿ ಅವರು ನೇಮಕವಾಗಿದ್ದಾರೆ.




