Sunday, November 22, 2026

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಪ್ರಕರಣ | ಸಾಕ್ಷಿದಾರನಿಗೆ ರಕ್ಷಣೆ ಒದಗಿಸಿ ; ನಿಷ್ಪಕ್ಷಪಾತ ತನಿಖೆ ನಡೆಸಿ – ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಸರಣಿ ಅತ್ಯಾಚಾರ, ಕೊಲೆ ಪ್ರಕರಣಗಳ ಕುರಿತು ಸಾಕ್ಷಿ ಹೇಳಲು ಬಂದಿರುವ ವ್ಯಕ್ತಿಗೆ ಹಾಗೂ ಆತನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿ, ಎಸ್.ಐ.ಟಿಯು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಮಂಡ್ಯನಗರದಲ್ಲಿ ಸಮಾನ ಮನಸ್ಕ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.

ಮಂಡ್ಯದ ಸಮಾನ ಮನಸ್ಕ ಸಂಘಟನೆಗಳು ಮತ್ತು ಮಾನವೀಯ ಮನಸುಳ್ಳ ನಾಗರೀಕರು ಸಮಾಜದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಮಹಿಳಾ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.

ಧರ್ಮಸ್ಥಳದಲ್ಲಿ ನಡೆದ ಆಘಾತಕಾರಿ ಪ್ರಕರಣಗಳ ಬಗ್ಗೆ ಸಾಕ್ಷಾಧಾರದೊಂದಿಗೆ ಮುಂದೆ ಬಂದಿರುವ ದೇವಾಲಯದ ಮಾಜಿ ಉದ್ಯೋಗಿಯ ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಜನರ ಮತ್ತು ಸಂಘಟನೆಗಳ ಒತ್ತಾಯಕ್ಕೆ ಮಣಿದು ವಿಶೇಷ ತನಿಖಾ ದಳ (SIT) ರಚಿಸಿರುವುದನ್ನು ಸ್ವಾಗತಿಸುತ್ತವೆ. ಪ್ರಕರಣದಲ್ಲಿ ಆರೋಪಿಗಳಾಗಿರುವವರ ಬಲಾಡ್ಯ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಈ ಹಿಂದಿನ ಸರ್ಕಾರಗಳು ಈ ವಿಚಾರದಲ್ಲಿ ದಿಟ್ಟ ನಿಲುವು ತಾಳಲು ಹಿಂಜರಿದಿರುವ ಇತಿಹಾಸವನ್ನು ನೆನಪಿಸಿಕೊಂಡು, ಈಗಿನ ಸರ್ಕಾರ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಕ್ಕೊತ್ತಾಯಗಳೇನು ? 

1.ಎಸ್ಐಟಿ ರಚನೆಗೆ ಸ್ವಾಗತ ಮತ್ತು ನಿಷ್ಪಕ್ಷ ತನಿಖೆಗೆ ಒತ್ತಾಯ

ಕರ್ನಾಟಕ ಸರ್ಕಾರವು ಧರ್ಮಸ್ಥಳದಲ್ಲಿ ಆರೋಪಿತ ಭೀಕರ ಅಪರಾಧಗಳ ತನಿಖೆಗಾಗಿ ವಿಶೇಷ ತನಿಖಾ ದಳ (SIT) ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಆದರೆ, ಈ ತನಿಖಾ ದಳವು ಅತ್ಯಂತ ನಿಷ್ಪಕ್ಷಪಾತವಾಗಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು. ಈ ಪ್ರಕರಣವನ್ನು ಇಡೀ ರಾಜ್ಯ ಮಾತ್ರವಲ್ಲ ದೇಶವೇ ಇಂದು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದೆ. ದಶಕಗಳ ಕಾಲ ಹೊರಜಗತ್ತಿಗೆ ತಿಳಿಯದೆ ವ್ಯವಸ್ಥಿತವಾಗಿ ಬಾಲಕಿಯರು, ಯುವತಿಯರು ಮತ್ತು ಮಹಿಳೆಯರು, ನಾಪತ್ತೆಯಾದ, ಆ ನಂತರ ಅತ್ಯಾಚಾರ ಮತ್ತು ಕೊಲೆಗೊಳಗಾಗಿದ್ದಾರೆ ಎಂಬ ಗಾಢ ಅನುಮಾನಗಳನ್ನು ಹುಟ್ಟಿಸಿರುವ ಈ ವ್ಯವಸ್ಥಿತ ಅಪರಾಧ ಸರಣಿಯಲ್ಲಿ ಅಪರಾಧಿಗಳು ಯಾರೇ ಆಗಿರಲಿ-ಅವರು ಎಷ್ಟೇ ಬಲಾಢ್ಯರಾದರೂ ಅವರನ್ನು ಕಾನೂನಿನ ಕಟಕಟೆಗೆ ತರಲೇಬೇಕು. ಈ ತನಿಖಾ ದಳವು ಸತ್ಯವನ್ನು ಬೆಳಕಿಗೆ ತಂದು, ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಆ ಮೂಲಕ, ಸರ್ಕಾರ ಹಾಗೂ SIT ಯು ಇನ್ನಿತರ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಒಂದು ಬಲವಾದ ಸಂದೇಶವನ್ನು ಸಮಾಜಕ್ಕೆ ನೀಡಿದಂತಾಗುತ್ತದೆ.

2. ಸಾಕ್ಷಿಗಳಿಗೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ರಕ್ಷಣೆ

ಈಗ ಸಾಕ್ಷ್ಯ ಒದಗಿಸಲು ಮುಂದೆ ಬಂದಿರುವ ದೇವಾಲಯದ ಮಾಜಿ ಉದ್ಯೋಗಿ-ಮತ್ತು ಇವರ ಕುಟುಂಬಕ್ಕೆ ಜೊತೆಗೆ ಭವಿಷ್ಯದಲ್ಲಿ ದೂರು ದಾಖಲಿಸಲು ಮುಂದೆ ಬರಬಹುದಾದ ಇತರರಿಗೆ, ಹಾಗೂ ಕಾಣೆಯಾದ ಅಥವಾ ಕೊಲೆಯಾದ ಹೆಣ್ಣುಮಕ್ಕಳ ಕುಟುಂಬಸ್ಥರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸಬೇಕು. ಈ ಸಾಕ್ಷಿಯು 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ನಡೆದ ಭೀಕರ ಅಪರಾಧಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಹೇಳಲಾಗಿದೆ. ಇವರ ಸುರಕ್ಷತೆಯನ್ನು ಖಾತರಿಪಡಿಸಲು 2018ರ ಸಾಕ್ಷಿಗಳ ರಕ್ಷಣಾ ಯೋಜನೆಯಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ, ಅನನ್ಯ ಭಟ್ (2003ರಲ್ಲಿ ಕಾಣೆಯಾದ ವೈದ್ಯಕೀಯ ವಿದ್ಯಾರ್ಥಿನಿ) ಮತ್ತು ಸೌಜನ್ಯ (2012ರಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಬಾಲಕಿ) ರಂತಹ ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ರಕ್ಷಣೆ ಮತ್ತು ಬೆಂಬಲವನ್ನು ಒದಗಿಸಬೇಕು.

ಈಗಾಗಲೇ ದಾಖಲಾಗಿರುವ ಪ್ರಕರಣಗಳ ಹೊರತಾಗಿಯೂ ಯಾವುದಾದರೂ ಕುಟುಂಬ ದೌರ್ಜನ್ಯ ಅಥವಾ ಅನ್ಯಾಯಕ್ಕೊಳಗಾಗಿದ್ದು ದೂರು ದಾಖಲಿಸಲು ಬಯಸುವುದಾದರೆ, ಅವರ ಮಾಹಿತಿ ಗೋಪ್ಯವಾಗಿಟ್ಟು ಸಂಪೂರ್ಣ ರಕ್ಷಣೆ ಒದಗಿಸುವ ಕುರಿತು ವಿಶ್ವಾಸ ಮೂಡಿಸುವಂತೆ, ವಿಶೇಷ ತನಿಖಾ ದಳವು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು.

3. ಸರ್ಕಾರದ ಜವಾಬ್ದಾರಿಯ ಕೊರತೆ: ಐತಿಹಾಸಿಕ ತಪ್ಪು

ಕಳೆದ ಕೆಲವು ದಶಕಗಳಿಂದ ಧರ್ಮಸ್ಥಳದಲ್ಲಿ ಆಗಾಗ್ಗೆ ಹೊರ ಬಂದಿರುವ ಇಂತಹ ಆರೋಪಗಳ ಬಗ್ಗೆ ನಾಡಿನ ಚಳವಳಿಗಳು ಸುದೀರ್ಘ ಹೋರಾಟಗಳನ್ನು ನಡೆಸಿವೆ. ಆದರೆ ಸುಮಾರು ಮೂರು ದಶಕಗಳ ಹಿಂದೆ ನಡೆದ ಪದ್ಮಲತಾ ಪ್ರಕರಣದಿಂದ ಹಿಡಿದು, ಆನೆ ಮಾವುತನ ಪ್ರಕರಣ, ಸೌಜನ್ಯ ಪ್ರಕರಣ ಮುಂತಾದ ಯಾವುದೇ ಘಟನೆಗಳಲ್ಲಿ ಆಡಳಿತದಲ್ಲಿದ್ದ ಸರ್ಕಾರಗಳು ಸಮರ್ಪಕ ಕ್ರಮ ಕೈಗೊಳ್ಳದಿರುವುದೇ ಈ ದೊಡ್ಡ ಸಂಖ್ಯೆಯ ಅಮಾಯಕ ಹೆಣ್ಣುಮಕ್ಕಳ ದುರಂತ ಸಾವಿಗೆ ಕಾರಣವಾಗಿದೆ. ಈ ತಪ್ಪಿನ ಸಂಪೂರ್ಣ ಹೊಣೆಯನ್ನು ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗಗಳು ಹೊರಬೇಕಾಗಿದೆ. ಈಗಲಾದರೂ ಈ ತಪ್ಪಿಗೆ ಪ್ರಾಯಶ್ಚಿತ್ತವೆಂದು ಭಾವಿಸಿ, ಸತ್ಯವನ್ನು ಬೆಳಕಿಗೆ ತರುವ ಪ್ರಾಮಾಣಿಕ ಕೆಲಸವು ಸರ್ಕಾರದ ಎಲ್ಲ ಯಂತ್ರಾಂಗಗಳಿಂದಲೂ ಆಗಬೇಕಿದೆ. ಅದರ ಭಾಗವಾಗಿ, ಸೌಜನ್ಯ ಪ್ರಕರಣದ ವಿಚಾರಣೆ ನಡೆಸಿ ಸಿಬಿಐ ನ್ಯಾಯಾಲಯ ಸೂಚಿಸಿದಂತೆ, ಸೌಜನ್ಯ ಪ್ರಕರಣದ ತನಿಖೆಯನ್ನು ದಿಕ್ಕುತಪ್ಪಿಸಿ, ಅದು ಸರಿಯಾದ ತಾರ್ಕಿಕ ಅಂತ್ಯ ಮುಟ್ಟಲುಸಾಧ್ಯವಾಗದಂತೆ ತಡೆದ ಪೊಲೀಸ್ ತನಿಖಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಪ್ರಕರಣದ ಮರುತನಿಖೆಗೆ ಆದೇಶಿಸಬೇಕು.

4. ಧಾರ್ಮಿಕ ಸಂಸ್ಥೆಗಳ ದುರ್ಬಳಕೆಯನ್ನು ತಡೆಗಟ್ಟುವುದು

ಧರ್ಮಸ್ಥಳದಂತಹ ಧಾರ್ಮಿಕ ಸಂಸ್ಥಾನಗಳನ್ನು ಕಟ್ಟಿಕೊಂಡು, ಮುಗ್ಧ ಜನರ ದೇವರ ಮೇಲಿನ ಭಕ್ತಿ ಮತ್ತು ಭಯವನ್ನು ದುರ್ಬಳಕೆ ಮಾಡಿಕೊಂಡು ಅನಾಚಾರ ಮತ್ತು ಅತ್ಯಾಚಾರಗಳನ್ನು ನಡೆಸುವ ಬಲಾಡ್ಯ ದುರುಳರನ್ನು ನಿಯಂತ್ರಣದಲ್ಲಿಡುವ ಕೆಲಸ ಸರ್ಕಾರದಿಂದ ಆಗಬೇಕು. ಇಂತಹ ದೂರುಗಳು ಬಂದಾಗ ಪ್ರಾಮಾಣಿಕ ತನಿಖೆ ನಡೆಸಿ ಆರೋಪಿಗಳನ್ನು ಕಾನೂನಿನ ಪ್ರಕಾರ ಶಿಕ್ಷಿಸುವ ಕೆಲಸವನ್ನು ಸರ್ಕಾರವು ಕೈಗೊಳ್ಳಬೇಕು. ಧಾರ್ಮಿಕ ಕ್ಷೇತ್ರಗಳು ಶಾಂತಿ ಮತ್ತು ನಂಬಿಕೆಯ ಕೇಂದ್ರಗಳಾಗಿರಬೇಕೇ ಹೊರತು, ಅಪರಾಧಗಳ ತಾಣವಾಗಿರಬಾರದು.

5.ಮಹಿಳೆಯರು ಕೇವಲ ಫಲಾನುಭವಿಗಳಲ್ಲ ಅಥವಾ ಮತದ ಬ್ಯಾಂಕುಗಳಲ್ಲ!

ಧರ್ಮಸ್ಥಳದ್ದೊಂದೇ ಅಲ್ಲ ರಾಜ್ಯದಾದ್ಯಂತ ಮಹಿಳೆಯರಿಂದು ಹತ್ತಾರು ಬಗೆಯ ದೌರ್ಜನ್ಯಗಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ. ಸರ್ಕಾರವು ಮಹಿಳೆಯರಿಗಾಗಿ ಜಾರಿ ಮಾಡಿರುವ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯಂತಹವುಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಅದಕ್ಕಾಗಿ ಸರ್ಕಾರವನ್ನು ಶ್ಲಾಘಿಸುತ್ತೇವೆ, ಆದರೆ, ಅದರಾಚೆಗೆ ಈ ನಾಡಿನ ನಾಗರೀಕರಾಗಿ ಮಹಿಳೆಯರಿಗೆ ಭದ್ರತೆ ಮತ್ತು ಘನತೆಯನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಹೀಗಾಗಿ, ಮಹಿಳೆಯರನ್ನು ಫಲಾನುಭವಿಗಳಂತೆ ಅಥವಾ ಕೇವಲ ಮತದಾರರಂತೆ ಪರಿಗಣಿಸುವ ಮನಸ್ಥಿತಿಯನ್ನು ರಾಜಕೀಯ ಪಕ್ಷಗಳು ಬದಲಿಸಿಕೊಳ್ಳಬೇಕು. ಮಹಿಳೆಯರ ಮೇಲೆ- ಅದರಲ್ಲೂ ಮುಖ್ಯವಾಗಿ ದಲಿತರು, ಅಲೆಮಾರಿ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ- ನಡೆಯುತ್ತಿರುವ ಬರ್ಬರ ಕೊಲೆಗಳು, ಭೀಕರವಾದ ಅತ್ಯಾಚಾರಗಳು, ಆಸಿಡ್ ದಾಳಿಗಳು ಮೊದಲಾಗಿ ಹತ್ತಾರು ಬಗೆಯ ದೌರ್ಜನ್ಯಗಳನ್ನು ತಡೆಗಟ್ಟುವ ದಿಕ್ಕಿನಲ್ಲಿ ಅತ್ಯಂತ ತುರ್ತಾಗಿ ಕೆಲಸ ಆಗಬೇಕಿದೆ. ಇದಕ್ಕಾಗಿ, ಮಹಿಳಾ ಸಂಘಟನೆಗಳು, ತಜ್ಞರು, ಕಾಳಜಿಯುಳ್ಳ ಗಣ್ಯ ನಾಗರೀಕರನ್ನೊಳಗೊಂಡಂತೆ ಸರ್ಕಾರದ ಸಭೆ ನಡೆಸಿ, ಪರಿಣಾಮಕಾರಿ ಹೆಜ್ಜೆಗಳನ್ನು ಮುಂದಿಡಬೇಕು.

7. ಧರ್ಮಸ್ಥಳದ ದೇವಾಲಯವನ್ನು ಸರ್ಕಾರ ಮುಜರಾಯಿ ಇಲಾಖೆಯ ಪರಿಧಿಗೆ ತರಬೇಕು

ತಮ್ಮ ಮನೆತನದ ಖಾಸಗಿ ಪೂಜಾಸ್ಥಳವೆಂದು ನ್ಯಾಯಾಲಯವನ್ನೂ ಒಪ್ಪಿಸಿ ಧರ್ಮಸ್ಥಳದ ಕುಟುಂಬ ತಮ್ಮ ವ್ಯಾಪ್ತಿಯಲ್ಲಿಟ್ಟುಕೊಂಡಿದ್ದ ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆದು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಖಾಸಗಿ ದುಷ್ಟಕೂಟಗಳು ಅಲ್ಲಿ ಅಮಾಯಕ ಜೀವಗಳನ್ನು ಬಲಿಕೊಡುವಂತಹ ಕೃತ್ಯಗಳನ್ನು ಎಸಗುವುದನ್ನು ತಡೆಯಲು ಅವಕಾಶವಾಗುತ್ತದೆ.

ಧರ್ಮಸ್ಥಳದ ಈ ಭೀಕರ ಪ್ರಕರಣದಲ್ಲಿ ಸತ್ಯವನ್ನು ಬೆಳಕಿಗೆ ತರಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಿದ್ಧರಿದ್ದೇವೆ. ಈ SIT ತನಿಖೆಯು ಒಂದು ಐತಿಹಾಸಿಕ ಪ್ರಕ್ರಿಯೆಯಾಗಬೇಕು. ಇದರಿಂದ ಭವಿಷ್ಯದಲ್ಲಿ ಇಂತಹ ಅಪರಾಧಗಳು ಮರುಕಳಿಸದಂತೆ ತಡೆಗಟ್ಟಬಹುದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ, ಕರ್ನಾಟಕ ಜನಶಕ್ತಿ ಜಿಲ್ಲಾಧ್ಯಕ್ಷ ಕೃಷ್ಣ ಪ್ರಕಾಶ್, ನ್ಯಾಯವಾದಿ ಬಿ.ಟಿ.ವಿಶ್ವನಾಥ್, ಜಾಗೃತ ಕರ್ನಾಟಕದ ಮುಖಂಡ ಎನ್.ನಾಗೇಶ್, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ರೈತಸಂಘದ ಲತಾಶಂಕರ್, ಮಹಿಳಾ ಮುನ್ನಡೆ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಶಿಲ್ಪಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ