ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಹಗರಣ, ಶಿಕ್ಷಕರ ನೇಮಕಾತಿಯಲ್ಲಿ ಹಗರಣ,ಅಸಿಸ್ಟೆಂಟ್ ಪ್ರೊಫೆಸರ್ ನೇಮಕದಲ್ಲಿ ಹಗರಣ ಮಾಡುವ ಮೂಲಕ ಸಾವಿರಾರು ಪದವೀಧರರ ಬಾಳಿಗೆ ಕೊಳ್ಳಿ ಇಟ್ಟ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಜೆಡಿಎಸ್ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ಟೀಕಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪಿಎಸ್ಐ ಪರೀಕ್ಷೆಯಲ್ಲಿ 54 ಸಾವಿರ ಪದವೀಧರ ಹಾಗೂ ಕಾಲೇಜು ಶಿಕ್ಷಕರ ನೇಮಕಾತಿಯಲ್ಲಿ 34 ಸಾವಿರ ಶಿಕ್ಷಕರ ಬಾಳಿಗೆ ಬಿಜೆಪಿ ಸರ್ಕಾರ ಬೆಂಕಿಯಿಟ್ಟಿದೆ. ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಶಿಕ್ಷಣ ಇಲಾಖೆಯನ್ನು ವ್ಯಾಪಾರಿ ಕೇಂದ್ರವನ್ನಾಗಿ ಮಾಡಿಬಿಟ್ಟಿದ್ದಾರೆ. ಇಂತವರಿಗೆ ಮತ ಕೇಳುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಪ್ರತಿ ಉದ್ಯೋಗ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.ಪಿಎಸ್ಐ ನೇಮಕಾತಿಯ 600 ಕ್ಕೂ ಹೆಚ್ಚು ಹುದ್ದೆಗಳಿಗೆ ಪ್ರತಿಯೊಬ್ಬರಿಂದ 40-50 ಲಕ್ಷ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.
ಎಡಿಜಿಪಿ ಅಮಿತ್ ಪೌಲ್ ಅವರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಐದು ಮಂದಿ ಸಚಿವರು,ಮೂವರು ಐಎಎಸ್ ಅಧಿಕಾರಿಗಳು ಹಾಗೂ 163 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಅವರ ಡೈರಿಯಿಂದ ಸ್ಪಷ್ಟವಾಗಿದೆ.ಅವರನ್ನು ಬಂಧಿಸಿದರೆ ಬಿಜೆಪಿಯ ನಾಯಕರೆಲ್ಲರೂ ಬೀದಿಗೆ ಬರುತ್ತಾರೆ ಎಂದು ಅವರನ್ನು ಬಂಧಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಾತಿ-ಜಾತಿಗಳ ನಡುವೆ, ಧರ್ಮ- ಧರ್ಮಗಳ ನಡುವೆ ಬೆಂಕಿ ಹಚ್ಚಿ ತಮಾಷೆ ನೋಡುವ ಕೆಲಸ ಮಾಡುತ್ತಿದೆ. ಇಂತಹ ಸರ್ಕಾರಕ್ಕೆ ಈ ಚುನಾವಣೆ ಒಂದು ಪಾಠವಾಗಬೇಕು. ಆದ್ದರಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ,ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ಬೆಂಬಲಿಸುವಂತೆ ಮನವಿ ಮಾಡಿದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಇತಿಹಾಸವಿಲ್ಲ. ಆದ್ದರಿಂದ ಈ ಚುನಾವಣೆಯ ಜೆಡಿಎಸ್- ಬಿಜೆಪಿ ಅಭ್ಯರ್ಥಿಗಳ ನೇರ ಚುನಾವಣೆಯಾಗಿದ್ದು, ಪ್ರತಿಯೊಬ್ಬ ಪ್ರಜ್ಞಾವಂತರು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಬಸವರಾಜ್, ನಗರ ಜೆಡಿಎಸ್ ಅಧ್ಯಕ್ಷ ಗೌರೀಶ್, ಜೆಡಿಎಸ್ ಘಟಕದ ಮಹಿಳಾಧ್ಯಕ್ಷೆ ಮಂಜುಳಾ ಉದಯಶಂಕರ್, ಎಸ್.ಕೆ.ಶಿವಪ್ರಕಾಶ್, ಶ್ರೇಯಸ್, ಕುಮಾರ್ ಉಪಸ್ಥಿತರಿದ್ದರು.
ಪಠ್ಯಪುಸ್ತಕ ಪರಿಷ್ಕರಣ ಸಮಿತಿ ವಜಾಗೆ ಆಗ್ರಹ
ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರ ಬಗ್ಗೆ ಲಘುವಾಗಿ ಮಾತನಾಡಿರುವ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನಡೆ ಖಂಡನೀಯವಾದುದ್ದು, ಕೂಡಲೇ ಮಂಡಳಿಯನ್ನು ವಜಾಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಒತ್ತಾಯ ಮಾಡಿದರು.
ಈ ಸಮಿತಿ ಹೊರತಂದಿರುವ ಪುಸ್ತಕವನ್ನು ವಜಾ ಮಾಡುತ್ತೇನೆ ಎಂದು ಸರ್ಕಾರವೇ ಒಪ್ಪಿಗೆ ನೀಡಿದೆ. ಇಷ್ಟು ಆದರೆ ಸಾಲದು ೧೫ದಿನದೊಳಗಾಗಿ ಈ ಪ್ರಾಧಿಕಾರವನ್ನೇ ವಜಾ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.