ಕಳೆದ 20 ವರ್ಷಗಳಲ್ಲಿ ವ್ಯಾಪಕವಾಗಿ ಬೆಳೆದ ಶಿಕ್ಷಣದ ಖಾಸಗೀಕರಣವು ಸಾಮಾಜಿಕ ಹೊಣೆಗೇಡಿತನಕ್ಕೆ ನಾಂದಿಯಾಡಿ, ವಿವೇಚನಾರಹಿತ ಜನ ಸಮೂಹ ಹೆಚ್ಚಾಗಲು ಕಾರಣವಾಗಿದೆ ಎಂದು ಪ್ರಗತಿಪರ ಚಿಂತಕ ಟಿ. ಯಶವಂತ್ ಆತಂಕ ವ್ಯಕ್ತಪಡಿಸಿದರು.
ಮಂಡ್ಯ ನಗರದಲ್ಲಿರುವ ಆರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2022-23 ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ-ಪ್ರತಿಭಾ ಪುರಸ್ಕಾರ ಹಾಗೂ ನಿಕಟಪೂರ್ವ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಅಸಮಾನತೆ ವ್ಯಾಪಕವಾಗಿ ಬೆಳೆದಿದ್ದು ಹೋಟೆಲ್ ಬೆಲೆಗಳ ರೀತಿ ಒಂದೊಂದರ ಬೆಲೆ ನಿಗದಿಯಾಗಿದೆ. ಶಿಕ್ಷಣದ ವ್ಯಾಪಾರಕ್ಕೆ ಸಮಾಜದ ಮನ್ನಣೆ ಸಿಕ್ಕಿರುವುದು ದುರದೃಷ್ಟಕರ. ಖಾಸಗಿ ಶಿಕ್ಷಣ ಸಂಸ್ಥೆಗಳ ಅನೈತಿಕ ಪೈಪೋಟಿ ಮಧ್ಯೆಯೂ ಸರ್ಕಾರಿ ಕಾಲೇಜುಗಳು ಉತ್ತಮ ಸಾಧನೆ ತೋರುತ್ತಿದ್ದರೂ ಪ್ರಚಾರ ಹಾಗೂ ಬೆಂಬಲ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಠ್ಯ ಕ್ರಮ ರಚನೆಯ ಬದಲು ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಟಗಳನ್ನು ವೈಭವೀಕರಿಸುವ ಪಠ್ಯಗಳನ್ನು ಭೋದಿಸಲಾಗುತ್ತಿದೆ. ನರ್ಸಿಂಗ್ ಕೋರ್ಸ್ ನ ಸಮಾಜ ವಿಜ್ಞಾನ ಪುಸ್ತಕದಲ್ಲಿ ವರದಕ್ಷಿಣೆ ಇರುವುದರಿಂದ ಕಡಿಮೆ ಸೌಂದರ್ಯ ಇರುವವರಿಗೆ ಮದುವೆ ಆಗುತ್ತದೆ ಎಂದು ವರದಕ್ಷಿಣೆಯನ್ನು ಸಮರ್ಥಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದ ಪಠ್ಯದಲ್ಲಿ ಹೆಣ್ಣನ್ನು ಚಂಚಲೆ ಎಂದು ಕೀಳಾಗಿ ಚಿತ್ರಿಸುವ ಪಾಠ ಭೋದಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹವುಗಳನ್ನು ವಿರೋಧಿಸಬೇಕು ಎಂದು ತಿಳಿಸಿದರು.
ಶಾಸನಸಭೆಗಳಿಗೆ ಕೊಟ್ಯಾಧೀಶರೇ ಆಯ್ಕೆಯಾಗುತ್ತಿರುವುದು,ಎಲ್ಲೆಡೆ ಭ್ರಷ್ಟಾಚಾರ ವ್ಯಾಪಿಸುತ್ತಿದೆ. ಅತ್ಯಂತ ಕಷ್ಟದ ದುಡಿಮೆಯ ರೈತ, ಕಾರ್ಮಿಕ, ಕೂಲಿಕಾರರ ಮೇಲೆ ಜಿಎಸ್ ಟಿ ಹೊರೆ ಹಾಕುತ್ತಿರುವುದು ಸಂವಿಧಾನ ಆಳ್ವಿಕೆಯ ಅಣಕವಾಗಿದ್ದು ಸಂವಿಧಾನ ರಕ್ಷಣೆಯ ಸವಾಲನ್ನು ವಿದ್ಯಾರ್ಥಿಗಳು ಸ್ವೀಕರಿಸಿ, ಸಂವಿಧಾನ ಮೌಲ್ಯಗಳಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಬಳಿಕ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗಣ್ಯರು ಪುರಸ್ಕರಿಸಿದರು. ನಿಕಟಪೂರ್ವ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಕಾರ್ಯ ನಡೆಯಿತು.
ವೇದಿಕೆಯಲ್ಲಿ ಪ್ರಾಂಶುಪಾಲ ಹನುಮಂತಯ್ಯ, ಸಮಾಜ ಸೇವಜ ನಿಖಿಲ್, ನಗರಸಭಾ ಸದಸ್ಯ ಸಯ್ಯದ್‌ವಾಸಿಂ, ನಿಕಟಪೂರ್ವ ಪ್ರಾಂಶುಪಾಲೆ ತ್ರಿವೇಣಿ, ಬಿಜೆಪಿ ಯುವ ಮುಖಂಡ ಚಾಮರಾಜ, ಸಾಂಸ್ಕೃತಿಕ ಕಾರ್ಯದರ್ಶಿ,ಉಪನ್ಯಾಸಕ ಕೆ.ಪಿ.ಮೃತ್ಯುಂಜಯ, ವಿದ್ಯಾರ್ಥಿ ನಾಯಕಿಯರಾದ ಆರ್.ವಿಸ್ಮಿತಾ, ಸ್ಫೂರ್ತಿ, ಮತ್ತು ಉಪನ್ಯಾಸಕರು ಹಾಜರಿದ್ದರು.




