ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ 10 ಸಾವಿರ ಜನರಿಗೆ ಹೆಲ್ಮೆಟ್ ವಿತರಣೆ ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮವನ್ನು ಜುಲೈ 27ರ ಮಧ್ಯಾಹ್ನ 3.30ಕ್ಕೆ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಸಚ್ಚಿದಾನಂದ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಸೇವೆಗಳನ್ನು ಮಾಡುವ ಉದ್ದೇಶದಿಂದ ಆರಂಭಗೊಂಡ ಎನ್.ಶಂಕರೇಗೌಡ ಚಾರಿಟೆಬಲ್ ಟ್ರಸ್ಟ್ ಪ್ರಾರಂಭಗೊಂಡು 5 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿ, ವಿರೋಧ ಪಕ್ಷದ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ ಅವರು ಭಾಗವಹಿಸಲಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ಉಚಿತ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಮುಂದಾಗಿದ್ದು, ಈಗಾಗಲೇ 8 ಮಂದಿಯನ್ನು ಗುರುತಿಸಲಾಗಿದೆ. ಉಚಿತ ಪ್ರವೇಶ ಪಡೆದ ವಿದ್ಯಾರ್ಥಿಗಳು ಕ್ಷೇತ್ರ ಎಷ್ಟು ಮಂದಿ ವಿದ್ಯಾರ್ಥಿಗಳು ಬಂದರೂ ಅವರಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಮಹಿಳೆಯರಿಗೆ ಹಾರೈಕೆ ಕಿಟ್ ವಿತರಣೆ
ಟ್ರಸ್ಟ್ ವತಿಯಿಂದ ಶ್ರೀರಂಗಪಟ್ಟಣ ಕ್ಷೇತ್ರದ 4500 ಮಹಿಳೆಯರಿಗೆ ಹಾರೈಕೆ ಕಿಟ್ ವಿತರಣೆ ಮಾಡಲಾಗಿದೆ. ಇತ್ತೀಚೆಗಷ್ಟೇ ಅಪಘಾತದಿಂದ ರುತಿಕ್ಷ ಎಂಬ ಬಾಲಕಿ ಮೃತಪಟ್ಟ ವೇಳೆ 10 ಸಾವಿರ ಹೆಲ್ಮೆಟ್ ವಿತರಣೆಯ ಶಪಥ ಮಾಡಿದ್ದೆ. ಈ ಹಿನ್ನಲೆ `ರುತಿಕ್ಷ ಸುರಕ್ಷ’ ಘೋಷವಾಕ್ಯದೊಂದಿಗೆ ದಾನಿಗಳು ಹಾಗೂ ಸ್ನೇಹಿತರ ಸಹಕಾರದಿಂದ ಹೆಲ್ಮೆಟ್ ಕ್ಷೇತ್ರದ ಜನತೆಗೆ ವಿತರಣೆ ಮಾಡಲಾಗುತ್ತಿದೆ. ಹೆಲ್ಮೆಟ್ ಪಡೆಯಲು ವಾಹನ ಸವಾರರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಅಭಿನಂದಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡರಾದ ಟ್ರಸ್ಟ್ ಸತೀಶ್, ರಮೇಶ್, ಸಂಜೀವ, ರಾಮಚಂದ್ರು ಹಾಗೂ ತ್ರಿಲೋಕ್ ಉಪಸ್ಥಿತರಿದ್ದರು.




