ರಾಮಕೃಷ್ಣ ಹೆಗಡೆ ಅವರು ಎಂದಿಗೂ ರಾಜಿ ವ್ಯವಸ್ಥೆಗೆ ಹೋಗಲಿಲ್ಲ, ಅವರ ಮುಖ್ಯಮಂತ್ರಿ ಆಗಿದ್ದಾಗ ಫೋನ್ ಕದ್ದಾಲಿಕೆ ಆರೋಪ ಬಂದ ಕ್ಷಣದಲ್ಲಿ ಕುರ್ಚಿ ತ್ಯಾಗ ಮಾಡಿದರು, ಮೌಲ್ಯಧಾರಿತ ರಾಜಕಾರಣ, ಉತ್ತಮ ಆಡಳಿತ ವ್ಯವಸ್ಥೆ ರೂಪಿಸಿದ ಅವರು ಅಪರೂಪದ ರಾಜಕಾರಣಿ, ಅವರು ತತ್ವ ಸಿದ್ಧಾಂತ ಬಿಟ್ಟು ರಾಜಕಾರಣ ಮಾಡಿದವರಲ್ಲ, ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್ ತಿಳಿಸಿದರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ಲೋಕ್ ಶಕ್ತಿ ಪಾರ್ಟಿ ಸಹಯೋಗದಲ್ಲಿ ನಡೆದ ದಿ. ರಾಮಕೃಷ್ಣ ಹೆಗಡೆಯವರ 20ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ರಕ್ತದಾನ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮೌಲ್ಯಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆ ಜಾರಿ ಮಾಡಿ ಪಂಚಾಯತ್ ಗಳಿಗೆ ಅಧಿಕಾರ ನೀಡುವ ಮೂಲಕ ಶಕ್ತಿಯುತ ರಾಜಕಾರಣ ವ್ಯವಸ್ಥೆ ರೂಪಿಸಿದ್ದರು. ವಿಕೇಂದ್ರಿಕರಣ ವ್ಯವಸ್ಥೆ ಜಾರಿ ಮಾಡಿ ಜಿಲ್ಲಾ ಪಂಚಾಯತ್ ಮತ್ತು ಮಂಡಲ ಪಂಚಾಯತಿಗೆ ಪರಮಾಧಿಕಾರ ನೀಡಿದ್ದರು, ಸಚಿವರಿಗೆ ಇದ್ದ ಅಧಿಕಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ, ಸದಸ್ಯರಿಗೆ ಶಾಸಕರ ಅಧಿಕಾರ ಇತ್ತು, ಮಂಡಲ ಪಂಚಾಯತ್ ಪ್ರಧಾನರಿಗೆ ಹೆಚ್ಚಿನ ಅಧಿಕಾರ ನೀಡಲಾಗಿತ್ತು, ಆದರೆ ಶಾಸಕರು ಮತ್ತು ಸಚಿವರು ನಮಗೆ ಹೆಚ್ಚಿನ ಅಧಿಕಾರ ಇಲ್ಲ ಎಂದು ಪಂಚಾಯತ್ ಅಧಿಕಾರ ಮೊಟಕುಗೊಳಿಸಿ ವಿಕೇಂದ್ರೀಕರಣ ವ್ಯವಸ್ಥೆ ಅಸ್ಥಿರಗೊಳಿಸಿದ್ದಾರೆ, ಈಗಿರುವ ಮೂರು ಹಂತದ ಪಂಚಾಯತ್ ಗಳಲ್ಲಿ ಅಧಿಕಾರಿಗಳದ್ದೇ ಕಾರುಬಾರು ಎಂದು ಹೇಳಿದರು.
ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂ ಗೌಡ ಮಾತನಾಡಿ, ನಾಯಿ ನಿಂತರೂ ಕಾಂಗ್ರೆಸ್ ಗೆಲ್ಲುತ್ತೆ ಎಂಬ ಮಾತು ಚಲಾವಣೆಯಲ್ಲಿದ್ದ ಕಾಲದಲ್ಲಿ ರೈತ, ದಲಿತ, ಕನ್ನಡಪರ ಹೋರಾಟದಿಂದ ರಾಜ್ಯದಲ್ಲಿ ಮೊದಲಿಗೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಉತ್ತಮ ಆಡಳಿತ ಮಾಡಿದ್ದರು, ಇದೀಗ ಹಣ ಉಳ್ಳವರು, ಕ್ರಿಮಿನಲ್ ಗಳಿಗೆ ರಾಜಕಾರಣ ಎಂಬ ಸ್ಥಿತಿ ನಿರ್ಮಾಣವಾಗಿದೆ, ಇದಕ್ಕೆ ಮತದಾರರು ಕೂಡ ಹೊಣೆಯಾಗಿದ್ದಾರೆ, ಒಳ್ಳೆಯವರು ಸಂಘಟಿತರಾಗಬೇಕಾಗಿದೆ, ಸಮಾನ ಮನಸ್ಕರು ಗೂಡದಿದ್ದರೆ, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಮುಖ್ಯಮಂತ್ರಿಯಾಗಿ ಜನಪರ ಆಡಳಿತ ಮಾಡಿದ ರಾಮಕೃಷ್ಣ ಹೆಗಡೆ ರವರ ಮೌಲ್ಯಧಾರಿತ ವ್ಯಕ್ತಿತ್ವ ಎಲ್ಲರಿಗೂ ಮಾದರಿ, ಕರ್ನಾಟಕ ರಾಜಕಾರಣದಲ್ಲಿ ಮೌಲ್ಯಧಾರಿತ ರಾಜಕಾರಣಕ್ಕೆ ಹೆಗಡೆ ಹೆಸರುವಾಸಿ ಎಂದು ಸ್ಮರಿಸಿದರು.
ಲೋಕ್ ಶಕ್ತಿ ಪಾರ್ಟಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ವಿ.ಸ್ಥಾವರಮಠ್ ಮಾತನಾಡಿ, ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ಮತ್ತು ಧರ್ಮ ಹಾಸು ಹೊಕ್ಕಾಗಿದೆ, ಯುವ ಸಮೂಹ ಧರ್ಮ, ಜಾತಿ ರಾಜಕಾರಣಕ್ಕೆ ಬಲಿಯಾಗಬಾರದು, ಸದೃಢ ಸಮಾಜ ನಿರ್ಮಾಣಕ್ಕಾಗಿ ಜನಪರ ಸಮಾಜಮುಖಿ ಕಾರ್ಯ ಮತ್ತು ರಾಜಕೀಯ ಇಚ್ಚಾ ಶಕ್ತಿ ಯೊಂದಿಗೆ ಪಕ್ಷವು ಕೆಲಸ ಮಾಡಲಿದೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಪತ್ರಕರ್ತ ಕೃಷ್ಣ ಸ್ವರ್ಣಸಂದ್ರ, ಡಿ.ಎಲ್ ಲಿಂಗರಾಜು, ಕನ್ನಡ ಸೇನೆ ಎಚ್ಎಸ್ ಮಂಜುನಾಥ್, ತಗ್ಗಳ್ಳಿ ಆನಂದ, ರಕ್ತದಾನಿ ಮಧುಚಂದ್ರ, ಲಯನ್ಸ್ ಕುಮಾರ್, ಪೂಜಾರಿ ಬೋರಯ್ಯ, ಭಾಗ್ಯ, ಸಮಾಜ ಸೇವಕ ಯೋಗೇಶ್ ಇತರರನ್ನು ಅಭಿನಂದಿಸಲಾಯಿತು
ಪತ್ರಕರ್ತರು ಸೇರಿದಂತೆ ಹಲವರು ರಕ್ತದಾನ ಮಾಡಿದರು, ಸ್ವರ್ಣ ಟಿವಿಯ ಶಂಭು ಕಬ್ಬನಹಳ್ಳಿ,ಲೋಕ್ ಶಕ್ತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ,ಮಾಣಿಕ್ಯನಹಳ್ಳಿ ವೆಂಕಟೇಶ್, ಎಂ.ಎನ್.ಶಂಕರ್ ಉಪಸ್ಥಿತರಿದ್ದರು.




