Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಡು, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಅಗತ್ಯ : ಜಫ್ರುಲ್ಲಾಖಾನ್

ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಅಭಿಮಾನ ಮತ್ತು ಕಾಳಜಿಯನ್ನು ಹೊಂದಿರಬೇಕು. ಜೊತೆಗೆ ತನ್ನ ಹುಟ್ಟೂರಿನ ಬೆಳವಣಿಗೆಗೆ ಶ್ರಮಿಸಬೇಕು. ಇಲ್ಲವಾದಲ್ಲಿ ಆತ ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಯೋಜನವಿಲ್ಲ ಎಂದು ಸಮಾಜ ಸೇವಕ ಹಾಗೂ ಉದ್ಯಮಿ ಜಫ್ರುಲ್ಲಾಖಾನ್ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಪ್ರೇರಣಾ ಅಂಧ ಮತ್ತು ವಿಶೇಷ ಚೇತನ ವಸತಿ ಶಾಲೆಯಲ್ಲಿ ತಮ್ಮ ಕುಟುಂಬದ ವತಿಯಿಂದ ಶಾಲೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ದೇಣಿಗೆ ನೀಡಿ, ನೂರಾರು ವಿಶೇಷ ಚೇತನ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋದಾಗ ನಮ್ಮ ತಂದೆ- ತಾಯಿಗಳು ಹಾಗೂ ನಮ್ಮ ಹುಟ್ಟೂರನ್ನು ಮರೆಯಬಾರದರು. ನಾವು ಸಮಾಜಕ್ಕೆ ಮಾದರಿಯಾಗಿ ಬೆಳೆದಾಗ ನಮ್ಮನ್ನೆತ್ತ ತಂದೆ- ತಾಯಿಗೆ ಸಾರ್ಥಕತೆ ಸಿಗುತ್ತದೆ. ಇಂದು ಕೆಲವರಿಗೆ ತಮ್ಮನ್ನು ಬೆಳೆಸಲು ಪೋಷಿಸಲು ತಂದೆ- ತಾಯಿ ಬೇಕಿತ್ತು. ಆದರೆ ಬೆಳೆದ ಮೇಲೆ ಹೆತ್ತ ಪೋಷಕರೇ ಬೇಡವಾಗಿದ್ದಾರೆ. ಅಂತಹವರು ಸಮಾಜದಲ್ಲಿ ಇದ್ದರೂ ಸತ್ತಂತೆ, ತಂದೆ ತಾಯಿಯನ್ನೇ ನೋಡಿಕೊಳ್ಳದವರು ವಿದ್ಯಾವಂತರಾಗಿ ಸಮಾಜವನ್ನು ತಿದ್ದಲು ಹೇಗೆ ಸಾಧ್ಯ. ನಾಲ್ಕು ಜನರಿಗೆ ಅವರು ಮಾದರಿಯಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇಂದಿನ ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರವಂತರಾಗಬೇಕು. ಆಗ ತಾವು ಬೆಳೆದು ನಾಲ್ಕು ಜನರಿಗೆ ಒಳಿತಲು ಮಾಡಲು ಸಾಧ್ಯವಾಗುತ್ತದೆ. ನಮ್ಮಿಂದ ನಾಲ್ಕು ಜನರಿಗೆ ಒಳಿತಾದಾಗ ಅದರಲ್ಲಿ ಸಿಗುವ ಸಾರ್ಥಕತೆ ಇನ್ಯಾವುದರಲ್ಲೂ ಸಿಗುವುದಿಲ್ಲ. ನಾವಿಲ್ಲವೆಂದರೂ ನಮ್ಮ ಕೆಲಸಗಳು ಹಾಗೂ ಸೇವೆಗಳು ಸಮಾಜದಲ್ಲಿ ಸದಾ ಕಾಲ ಉಳಿಯಬೇಕು. ನಮ್ಮ ಭೂಮಿ, ಭಾಷೆ, ಸಂಸ್ಕೃತಿಯನ್ನು ಬೆಳೆಸಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಫ್ರುಲ್ಲಾಖಾನ್ ಕುಟುಂಬದ ವತಿಯಿಂದ ವಸತಿ ಶಾಲೆಗೆ ದೇಣಿಗೆ ನೀಡಿ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಜಫ್ರುಲ್ಲಾಖಾನ್ ಪುತ್ರಿ ಸಮೀರಾ ಖಾನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಮಾಜಿ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರೇರಣಾ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ