Friday, November 20, 2026

ಪ್ರಾಯೋಗಿಕ ಆವೃತ್ತಿ

ಸಂಚಾರಿ ನಿಯಮ ಉಲ್ಲಂಘಿಸಿದರೆ ವಿರುದ್ಧ ಕಾನೂನು ಕ್ರಮ : ಡಾ.ಕುಮಾರ

ಕಾನೂನಿಗಿಂತ ದೊಡ್ಡವರು ಯಾರು ಇಲ್ಲ, ಸಾರ್ವಜನಿಕರು ಹಾಗೂ ಪ್ರಯಾಣಿಕರ ಹಿತಾಶಕ್ತಿಯಿಂದ ಸಂಚಾರಿ ನಿಯಮಗಳನ್ನು ರೂಪಿಸಿದ್ದು, ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.

ಮಂಗಳವಾರ ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 1327 ಆಪೆ ಆಟೋಗಳು ಕಾರ್ಯ ನಿರ್ವಹಿಸುತ್ತಿವೆ, ಆಪೆ ಆಟೋಗಳ ಮಾಲೀಕರು ಸೀಟುಗಳನ್ನು ಹೆಚ್ಚಿಸುವ ಸಲುವಾಗಿ ಆಪೆ ಆಟೋಗಳ ವಿನ್ಯಾಸ ಮಾರ್ಪಾಡು ಮಾಡುತ್ತಿರುವುದು ಹಾಗೂ ತಮ್ಮ ವ್ಯಾಪ್ತಿಯನ್ನು ಮೀರಿ ಸಂಚಾರ ನಡೆಸುತ್ತಿರುವುದು ಕಂಡುಬಂದಿರುತ್ತದೆ. ಇವುಗಳು ಸಂಚಾರಿ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ತಮ್ಮ ಆಪೆ ಆಟೋಗಳನ್ನು ಮಾರ್ಪಾಡು ಮಾಡಿಕೊಂಡಿರುವ 154 ಅಪೆ ಆಟೋಗಳ ವಿರುದ್ಧ 11.70 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ವಿಧಿಸಿದಾಗಿಯೂ ಸಂಚಾರಿ ನಿಯಮಗಳನ್ನು ಮೀರಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ಯಾಸೆಂಜರ್ ಆಟೋ ಚಾಲಕರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ನಿವೇಶನ ಇದ್ದು ಮನೆಯಿಲ್ಲದ ಆಟೋ ಚಾಲಕರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹಾಗೂ ನಿವೇಶನ ಮತ್ತು ಮನೆ ಎರಡೂ ಇಲ್ಲದ ಆಟೋ ಚಾಲಕರು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ. ಸರ್ಕಾರ ನೀಡುವ ಯೋಜನೆಗೆ ಆಟೋ ಚಾಲಕರು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದರು.

ಅಟೋ ರಿಕ್ಷಾ ಚಾಲಕರ ಸಂಘದ ಮಾಲೀಕರು 2017ರಲ್ಲಿ ಬಾಡಿಗೆ ದರ ಪರಿಷ್ಕರಣೆಯಾಗಿತ್ತು. ಪೆಟ್ರೋಲ್, ಡೀಸಲ್ ದರ ಹಾಗೂ ಆಟೋ ರಿಕ್ಷಾ ಬಿಡಿ ಭಾಗಗಳ‌ ದರ ಹೆಚ್ಚಾಗಿದ್ದು, ಬಾಡಿಗೆ ದರ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ದರ ಪರಿಷ್ಕರಣೆ ಸಂಬಂಧ ತಾಂತ್ರಿಕ ಸಮಿತಿ‌ ರಚಿಸಿ ವರದಿ ಪಡೆದು ಸೂಕ್ತ ದರ ನಿಗದಿ ಮಾಡುವುದಾಗಿ ತಿಳಿಸಿದರು.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ಪ್ರಾದೇಶಿಕ ಸಾರಿಗೆ ಇಲಾಖೆ ಒಳಗೊಂಡಂತೆ ಶೀಘ್ರವೇ ಒಂದು ತಂಡವನ್ನು ರಚಿಸಿ ಎಫ್.ಸಿ. ಅವಧಿ ಮೀರಿ ಓಡಿಸುತ್ತಿರುವ ಹಾಗೂ ಮಾರ್ಪಾಡು ಮಾಡಿರುವ ಆಟೋ ರಿಕ್ಷಾಗಳನ್ನು ಹಿಡಿದು ಸೀಜ್ ಮಾಡಲಾಗುವುದು ಎಂದರು.

ಪ್ಯಾಸೆಂಜರ್ ಆಟೋ ಚಾಲಕರು ಆಟೋ ನಿಲ್ದಾಣಗಳಲ್ಲಿ ದರ ಸೂಚ್ಯಂಕ ಫಲಕವನ್ನು ಅಳವಡಿಸಬೇಕು, ಪ್ರಯಾಣಿಕರು ಸಂಚರಿಸುವ ಸಂದರ್ಭದಲ್ಲಿ ಮೀಟರ್ ಹಾಕಬೇಕು ಹಾಗೂ ನಿಗದಿತ ದರವನ್ನು ಮಾತ್ರ ಪಡೆಯಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಜಿಲ್ಲಾ ಆಟೋ ಚಾಲಕರ ಅಧ್ಯಕ್ಷ ಕೃಷ್ಣ, ಪ್ರಾದೇಶಿಕ ಸಾರಿಗೆ ಇಲಾಖೆಯ ಸಂತೋಷ್, ಚಂದ್ರಶೇಖರ್ ಸೇರಿದಂತೆ ಇನ್ನಿತರ ಆಟೋ ಚಾಲಕರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ