Friday, November 20, 2026

ಪ್ರಾಯೋಗಿಕ ಆವೃತ್ತಿ

ಆರಗ ಜ್ಞಾನೇಂದ್ರ ಮಾತುಗಳು, ಕೇಶವ ಕೃಪಾ ಪ್ರಭಾವದ ಮಾತು – ಪ್ರಿಯಾಂಕ್ ಖರ್ಗೆ

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣ ವಿಚಾರವಾಗಿ ನಾಲಿಗೆ ಹರಿಬಿಟ್ಟಿದ್ದರು. ”ಮನುಸ್ಮೃತಿಯನ್ನು ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿಗೆ ದಲಿತರ ರಾಜಕೀಯ ಏಳಿಗೆಯ ಬಗ್ಗೆ ತೀವ್ರ ಅಸಹನೆ ಇರುವುದು ಅವರ ಮಾತುಗಳಿಂದ ಹೊರಬರುತ್ತವೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

“>

 

ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೀಗ ಪ್ರೀಯಾಂಕ್ ಖರ್ಗೆ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

”ಆರಗ ಜ್ಞಾನೇಂದ್ರ  ಅವರೇ, ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು” ಎಂದು ಕಿಡಿಕಾರಿದ್ದಾರೆ.

”ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ. ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಿನಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು, ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ” ಎಂದು ತಿರುಗೇಟು ಕೊಟ್ಟಿದ್ದಾರೆ.

”ಆರಗ ಜ್ಞಾನೇಂದ್ರ ಅವರು ಒಂದೇ ಒಂದು ದಿನ ಮಣ್ಣು ಹೊತ್ತರೆ ಅವರ ಮೈಬಣ್ಣವೂ ಕಪ್ಪಗಾಗುತ್ತದೆ. ಮನುಸ್ಮೃತಿಯ ವರ್ಣಾಶ್ರಮವನ್ನು ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿಗೆ ದಲಿತರ ರಾಜಕೀಯ ಏಳಿಗೆಯ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ” ಆಕ್ರೋಶ ಹೊರಹಾಕಿದ್ದಾರೆ.

”ಬಿಜೆಪಿಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರಕಲು ಮಾಡುತ್ತದೆ, ಏಕೆಂದರೆ ಇದು ಮನುಸ್ಮೃತಿಯ ಕಾಲವಲ್ಲ, ಬಾಬಾ ಸಾಹೇಬರ ಸಂವಿಧಾನದ ಕಾಲ” ಎಂದು ಪ್ರಿಯಾಂಕ್ ಖರ್ಗೆ ಅವರು ಆರಗ ಜ್ಞಾನೇಂದ್ರ ಅವರಿಗೆ ಛಾಟಿ ಬೀಸಿದ್ದಾರೆ.

ಆರಗ ಜ್ಞಾನೇಂದ್ರ ಹೇಳಿದ್ದೇನು?

ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ, ಮಂಗಳವಾರ ತೀರ್ಥಹಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಸರ್ಕಾರದ ನೀತಿ ವಿರೋಧಿಸಿ ಘೋಷಣೆ, ಧಿಕ್ಕಾರ ಕೂಗಲಾಗುತ್ತಿತ್ತು. ಈ ವೇಳೆ ಆರಗ ಜ್ಞಾನೇಂದ್ರ ಅವರ ಮಾತಿನ ಸರದಿ ಬಂದಾಗ ಈಶ್ವರ್ ಖಂಡ್ರೆ ಹಾಗೂ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.

”ಅರಣ್ಯ ಸಚಿವರಿಗೆ ಪಶ್ಚಿಮಘಟ್ಟದ ಜನರ ಜೀವನಕ್ರಮ, ಗಿಡ- ಮರಗಳ ಕುರಿತು ತಿಳಿವಳಿಕೆ ಇಲ್ಲ. ಪಶ್ಚಿಮ ಘಟ್ಟಗಳ ಬಗ್ಗೆ ವರದಿ ನೀಡಿರುವ, ವಿಜ್ಞಾನಿ ಕಸ್ತೂರಿರಂಗನ್ ಪರಿಸರ ತಜ್ಞ ಅಲ್ಲ” ಎಂದು ಖಂಡ್ರೆ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಹರಿಹಾಯ್ದರು.

”ಅವರಿಗೆ ಮರ-ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ. ಮರದ ನೆರಳಿನ ಮಹತ್ವ ಗೊತ್ತಿಲ್ಲ. ಸುಟ್ಟು ಕರಕಲಾದಂತೆ ಇರ್ತಾರೆ…, ನಮ್ಮ ಖರ್ಗೆಯವರನ್ನ ನೋಡಿದ್ರೇ ಗೊತ್ತಾಗುತ್ತೆ. ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ.  ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಅವರಿಗೆ ಗೊತ್ತಿಲ್ಲ..” ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿಯೇ ಅವರ ಬಣ್ಣದ ಬಗ್ಗೆ ವ್ಯಂಗ್ಯ ಮಾಡುವಂತೆ ಮಾತನ್ನಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ