ಮನೆ ಬಳಿಗೆ ಬರುವ ಉಚಿತ ಆರೋಗ್ಯ ಸೇವೆಯನ್ನು ವೃದ್ಧರು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಿಶು ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಾಜು ಮೂರ್ತಿ ತಿಳಿಸಿದರು.
ಮಂಡ್ಯದ ಗಾಂಧಿನಗರದ ಅಂಬೇಡ್ಕರ್ ಭವನದಲ್ಲಿ ವಿಕಾಸನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಗಾಂಧಿನಗರ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳು ಸಾರ್ವಜನಿಕರ ಮನೆಬಾಗಿಲಿಗೆ ಬಂದು ನೀಡುವ ಸೇವೆಯನ್ನು ಹೆಚ್ಚೆಚ್ಚು ಉಪಯೋಗಿಸಿಕೊಳ್ಳಬೇಕು. ಜೊತೆಗೆ ವೈದ್ಯರು ಹೇಳಿದ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ, ಮೊಟ್ಟೆ, ಹಾಲು ಸೊಪ್ಪು, ತರಕಾರಿ, ಹೆಚ್ಚು ಹೆಚ್ಚು ತಿನ್ನಬೇಕೆಂದು ಸಲಹೆ ನೀಡಿದರು.
ಇವತ್ತು ಒಬ್ಬ ವ್ಯಕ್ತಿ ಕಾಯಿಲೆಯಿಂದ ನರಳುತ್ತಿದ್ದು ಖಾಸಗಿ ನರ್ಸಿಂಗ್ ಹೋಮ್ ಮತ್ತು ಕ್ಲಿನಿಕ್ ಗಳಿಗೆ ಹೋಗಿ ವೈದ್ಯರ ಸಲಹೆ ಪಡೆಯಬೇಕೆಂದರೆ ಮಿನಿಮಮ್ 200 ರಿಂದ 500 ರೂಪಾಯಿಗಳನ್ನು ವೈದ್ಯರಿಗೆ ನೀಡುವ ಪರಿಸ್ಥಿತಿ ಇದೆ.
ಆದ್ದರಿಂದ ಇಂತಹ ಸಂಘ ಸಂಸ್ಥೆಗಳು ಉಚಿತವಾಗಿ ನೀಡುವ ಆರೋಗ್ಯ ಸೇವೆಗಳನ್ನು ನೀಡುವುದನ್ನು ಸಾರ್ವಜನಿಕರು ಬಳಸಿ ಕೊಳ್ಳುವುದಲ್ಲದೆ ವೈದ್ಯರು ಹೇಳಿದ ಸಲಹೆಯಂತೆ ಪೌಷ್ಟಿಕ ಆಹಾರ ಸೇವಿಸಲು ಮುಂದಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಎಚ್. ಲೋಕೇಶ್ವರ್, ಪ್ರಧಾನ ಕಾರ್ಯದರ್ಶಿ ಎಂ.ಎಲ್ ತುಳಸೀಧರ್, ಅನುರಾಧ, ಡಾ. ಮಧುಸೂದನ್, ನಿರಂಜನ್, ವಿಕಸನ ಸಂಸ್ಥೆ ಕಾರ್ಯಕರ್ತೆ ರಾಧ ಉಪಸ್ಥಿತರಿದ್ದರು.




