Monday, November 23, 2026

ಪ್ರಾಯೋಗಿಕ ಆವೃತ್ತಿ

ಬಜೆಟ್‌ನಲ್ಲಿ ದಲಿತ ಸಮುದಾಯಕ್ಕಾಗಿರುವ ವಂಚನೆ ಸರಿಪಡಿಸಿ : ವೆಂಕಟಗಿರಿಯಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರಸಕ್ತ ಬಜೆಟ್‌ನಲ್ಲಿ ದಲಿತ ಸಮುದಾಯಕ್ಕಾಗಿರುವ ವಂಚನೆ ಸರಿಪಡಿಸಿ ರಾಜ್ಯದ ಅಭಿವೃದ್ಧಿ ಪೂರಕವಾಗಿ ಸ್ಪಂದಿಸಲು ಮುಂದಾಗಬೇಕು ಎಂದು ಕದಸಂಸ ರಾಜ್ಯಾದ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೫-೨೬ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ೪೨ ಸಾವಿರ ಕೋಟಿ ಅನುದಾನದಲ್ಲಿ ೩೦ ಸಾವಿರ ಕೋಟಿಯನ್ನು ಗ್ಯಾರೆಂಟಿಗಳಿಗೆ ಬಳಸಿಕೊಳ್ಳಲಾಗಿದೆ. ದಲಿತರನ್ನು ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಿಂದ ವಂಚಿಸಿ ಸಾಧನಾ ಸಮಾವೇಶ ಸಂಘಟಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ರಾಜೀನಾಮೆ ನೀಡಬೇಕೆಂದರು.

ಸಮುದಾಯದ ಹಣ ದುರ್ಬಗಳಕೆಯನ್ನೇ ೧೦೦೦ ದಿನಗಳ ಸಾಧನೆ ಎಂದುಕೊಂಡು ಸಮಾವೇಶ ನಡೆಸುತ್ತಿರುವುದು ನೈತಿಕ ಪ್ರಜಾಪ್ರಭುತ್ವದ ಅಧಃಪತನವಾಗಿದೆ. ಆದ್ದರಿಂದ ಪ್ರಸಕ್ತ ಬಜೆಟ್‌ನಲ್ಲಿ ತೆಲಂಗಾಣ ರಾಜ್ಯದ ಮಾದರಿ ರಾಜ್ಯದ ಪ್ರತಿ ಕುಟುಂಬಕ್ಕೆ ೨೫ ಲಕ್ಷ ವಿಶೇಷ ಅನುದಾನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಬಜೆಟ್‌ನಲ್ಲಿ ಗ್ಯಾರೆಂಟಿಗೆಂದು ೫೬ ಸಾವಿರ ಕೋಟ ಅನುದಾನ ಘೋಷಿಸಿದ್ದರೂ ಪರಿಶಿಷ್ಠರಿಗೆ ಮೀಸಲಿರಿಸಿದ ಅನುದಾನ ವರ್ಗಾಯಿಸಿದ್ದೇಕೆ ಎಂಬುದನ್ನು ಉತ್ತರಿಸಬೇಕು. ೨೦೧೩ರಲಿ ಎಸ್ಸಿಎಸ್ಪಿ & ಟಿಎಸ್ಪಿ ಅನುದಾನದ ೨ ಲಕ್ಷ ಕೋಟಿ ರೂ ಅನ್ಯ ಯೋಜನೆಗಳಿಗೆ ಬಳಸಲಾಗಿದೆ. ಆದ್ದರಿಂದ ಪ್ರಸಕ್ತ ಬಜೆಟ್‌ನಲ್ಲಿ ೨೫ ಲಕ್ಷ ರೂ .ಪ್ರತಿ ಕುಟುಂಬಕ್ಕೆ ಮೀಸಲಿಡಬೇಕು. ಮರ್ಯಾದೆ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಬೇಕು. ತಮಿಳುನಾಡು ಸರಕಾರದಂತೆ ಶೇ.೭೫ರಷ್ಟು ಮೀಸಲಾತಿ ನೀತಿ ಜಾರಿ ಮಾಡಬೇಕು. ಉಚಿತ ಶಿಕ್ಷಣ, ಆರೋಗ್ಯ ಸೇವೆ ನೀಡಬೇಕು. ಸರಕಾರಿ ಸೇವಾ ಸಂಸ್ಥೆಗಳು, ಕೈಗಾರಿಕೆಗಳನ್ನು ಖಾಸಗೀಕರಿಸುವುದು ನಿಲ್ಲಿಸಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಖು. ರೈತರ ಸಾಲ ಮನ್ನ ಮಾಡಬೇಕು. ಕೃಷಿ ಕೂಲಿ ಕಾರ್ಮಿಕ ಮಹಿಳೆಯರಿಗೂ ಕೂಲಿ ಸಹಿತ ಋತುಚಕ್ರ ರಜೆ ಘೋಷಿಸಬೇಕೆಂದು ಒತ್ತಾಯಿಸಿದರು.

ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಪರಿವರ್ತನೆ, ಕೆರೆಗಳ ಹೂಳೆತ್ತಿಸಿ ನೀರು ತುಂಬಿಸುವುದು. ಅರಣ್ಯ ಸಂರಕ್ಷಣೆಗೆ ಅನುದಾನ, ಮೈಷುಗರ್ ಆಧುನೀಕರಣಕ್ಕೆ ಒಂದೇ ಕಂತಿನಲ್ಲಿ ಅನುದಾನ, ಹೇಮಾವತಿ ನಾಲಾ ನೀರಾವರಿ ಭಾಗದ ಅರೆ ಖುಷ್ಕಿ ಬೆಳೆಗೆ ಸಮರ್ಪಕ ನೀರು ಒದಗಿಸಲು ನಾಲೆಗಳ ಅಭಿವೃದ್ಧಿಗೆ ಅನುದಾನ, ಕಾವೇರಿ ದೀಪಾರತಿ ಬಿಟ್ಟು ಅದೇ ಅನುದಾನದ್ಲಿ ಕಾವೇರಿ ನೀರು ಸದ್ಬಳಕೆ, ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ಮಂಡ್ಯ ವಿವಿಯಲ್ಲಿ ನಾಲ್ವಡಿ ಕಷ್ಣರಾಜ ಒಡೆಯರ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಅನುದಾನ, ಜಿಲ್ಲಾ ಎಲ್ಲ ತಾಲೂಕಿನಲ್ಲೂ ಬುದ್ಧ ವಿಹಾರ ಕೇಂದ್ರ ನಿರ್ಮಾಣಕ್ಕೆ ತಲಾ ೧೦ ಎಕರೆ ಭೂಮಿ, ಬೌದ್ಧ ವಿಹಾರ ನಿರ್ಮಾಣಕ್ಕೆ ತಲಾ ೧೦ ಕೋಟಿ ಅನುದಾನ ನೀಡುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ್, ಸಂಘಟನಾ ಸಂಚಾಲಕ ಸುರೇಶ್‌ಕುಮಾರ್, ಮಹಿಳಾ ಜಿಲಾಧ್ಯಕ್ಷೆ ಜಿ.ಸುಶ್ಮಿತ, ತಾಲೂಕು ಅಧ್ಯಕ್ಷರಾದ ಬಿ.ಎಸ್.ಗೀತಾ, ಪುಟ್ಟಲಿಂಗಯ್ಯ, ಗೀತಾ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ