ಮಂಡ್ಯ ಜಿಲ್ಲಾ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಮತಕಳವು ವಿರುದ್ಧ ‘ಲೋಕತಂತ್ರ ಉಳಿಸಿ’ ಎಂಬ ಪ್ರತಿಭಟನಾ ಮೆರವಣಿಗೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಜೆ ಮಂಡ್ಯ ನಗರದಲ್ಲಿ ನಡೆಸಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೇಣದಬತ್ತಿಗಳನ್ನು ಹಚ್ಚಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಉದ್ಯಾನವನದಲ್ಲಿರುವ ಗಾಂಧಿ ಪ್ರತಿಮೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮತಗಳ್ಳರೇ ಅಧಿಕಾರ ಬಿಡಿ ಎಂದು ಘೋಷಣೆ ಕೂಗಿ ಚುನಾವಣಾ ಅಕ್ರಮಗಳಿಗೆ ಕಾರಣವಾಗಿರುವ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ಶ್ರೀಧರ್ ಮಾತನಾಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿರ್ದೇಶನದ ಮೇರೆಗೆ ದೇಶಾದ್ಯಂತ ಮತ ಕಳ್ಳತನದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ಹಾಗೂ ಮೇಣದಬತ್ತಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದಲ್ಲಿ ಅಮೂಲ್ಯವಾದ ಮತವನ್ನು ಕೊಟ್ಟರು.ನಮಗೆ ಬೇಕಾದ ಸರ್ಕಾರವನ್ನು ರಚನೆ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಬಿಜೆಪಿ ಪಕ್ಷದ ಏಜೆಂಟರ ರೀತಿ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ.ಈಗಾಗಲೇ ಚುನಾವಣಾ ಆಯೋಗ ತನ್ನ ವೆಬ್ಸೈಟ್ ನ್ನು ಬಂದ್ ಮಾಡಿದೆ ಎಂದು ತಿಳಿಸಿದರು.
ದೇಶದ ಪ್ರತಿಯೊಬ್ಬ ಜನತೆಗೂ ಮತ ಕಳ್ಳತನದ ವಿಚಾರ ತಿಳಿಯಬೇಕು,ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ. ದ್ಯಾವಪ್ಪ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಹನ್ಸಿಯಬಾನ್, ಶಶಿಕಲಾ,ನಾಗಮಣಿ, ಕಮಲರಾಜು,ಜ್ಯೋತಿ, ನಸ್ರಿನ್ ತಾಜ್, ಅಭಿಲಾಶ್, ಹರೀಶ್, ಚಂದಗಾಲು ವಿಜಯಕುಮಾರ್, ಅನುರಾಧ, ಕನ್ನಲಿ ಚೆನ್ನಪ್ಪ,ಆಟೋ ಕೃಷ್ಣ, ನಾಗೇಶ್, ಮಂಜುನಾಥ್ ಇತರರು ಹಾಜರಿದ್ದರು.




