ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗಾಗಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕುರಿತು ಒಳಮೀಸಲಾತಿಯನ್ನಷ್ಟೇ ನೀಡಲಾಗಿದೆ, ಆದರೆ ರಾಜಕೀಯ ಮೀಸಲಾತಿ ಪ್ರಸ್ತಾಪವಿಲ್ಲದಿರುವುದರಿಂದ ಒಳ ಮೀಸಲಾತಿಗೆ ಅರ್ಥವಿಲ್ಲದಂತಾಗಿದೆ ಎಂದು ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಆಧ್ಯಕ್ಷ ಎನ್.ಚಂದ್ರಶೇಖರ್ ತಿಳಿಸಿದ್ದಾರೆ.
ಸರ್ಕಾರದ ಎಸ್ಸಿಎಸ್ಪಿ, ಟಿಎಸ್ಪಿ ಹಣ ಹಣ ಬಳಕೆಯಲ್ಲಿ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ್, ನಗರಸಭೆ, ಪುರಸಭೆ, ಹಾಗೂ ಶಾಸಕರ ಸಂಸದರ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಗೊಳಿಸದೇ ಒಳ ಮೀಸಲಾತಿ ಜಾರಿಯಾದರೆ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ, ಆದ್ದರಿಂದ ರಾಜಕೀಯ, ಆರ್ಥಿಕ ಮೀಸಲಾತಿ ಪಡೆಯಲು ಸಮುದಾಯದ ಸಂಘಟನೆಗಳು ಹೋರಾಟಕ್ಕಿಳಿಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲ ಜಾತಿ ದೃಢೀಕರಣ ಪತ್ರ ನೀಡದೇ, ಉದ್ಯೋಗ ತುಂಬುವ ಪ್ರಯತ್ನ ನಡೆಯುತ್ತಿದೆ, ಇದರಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಆದ್ದರಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಆದೇಶ ಹೊರಡಿಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಅವರಿಗೆ. ಈಗಿರುವ ಜಾತಿ ದೃಢೀಕರಣ ಪತ್ರ ರದ್ದು ಮಾಡಿ, ಮೂಲ ಜಾತಿಯ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ನೀಡಲು ಆದೇಶ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸೆ.4 ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.




