ಯಾವುದೇ ವಿವಾದ ಬಂದರೂ ಅದನ್ನು ನಿವಾರಣೆ ಮಾಡಿಕೊಂಡು ಹಾಗೂ ವಿವಾದಗಳಿಗೆ ಅವಕಾಶ ಕೊಡದೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಂಡು ಹೋದರೆ ಕೈಗಾರಿಕೆಗಳಲ್ಲಿ ಶಾಂತಿ,ನೆಮ್ಮದಿ ಇರುತ್ತದೆ ಎಂದು ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ಡಾ. ಎಸ್. ಪಿ. ರವಿಕುಮಾರ್ ತಿಳಿಸಿದರು.
ಮಂಡ್ಯ ನಗರದ ಸುರಭಿ ಸಭಾಂಗಣದಲ್ಲಿ ಕಾರ್ಮಿಕ ಜಂಟಿ ಆಯುಕ್ತರು ಬೆಂಗಳೂರು, ಜಿಲ್ಲಾ ನೋಡಲ್ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಕಾರ್ಮಿಕರು ಮತ್ತು ಮಾಲೀಕರುಗಳ ಸಂಘದ ಪದಾಧಿಕಾರಿಗಳ ಜೊತೆ ನಡೆದ ಸಮಾಲೋಚನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಆಗುತ್ತಿರುತ್ತದೋ ಅಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ. ಎಲ್ಲರ ಜನಜೀವನ ಉತ್ತಮವಾಗಿರುತ್ತದೆ. ಉತ್ತಮ ಮನೋಭಾವನೆ ಇಟ್ಟುಕೊಂಡು ಆಲೋಚನೆ ಮಾಡಿದರೆ ಯಾವುದೇ ಸಮಸ್ಯೆಗಳು ಬಂದರೂ ಕೂಡ ಸ್ಥಳೀಯ ಹಂತದಲ್ಲೇ ಪರಿಹರಿಸಬಹುದು. ಇದರಿಂದ ಕಾರ್ಮಿಕರು ಹಾಗೂ ಮಾಲೀಕರ ನಡುವೆ ಉತ್ತಮ ಬಾಂಧವ್ಯ ಬೆಳೆದು ಕೈಗಾರಿಕೆ ಬೆಳವಣಿಗೆ ಆಗುತ್ತದೆ ಎಂದರು.
ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದಂತೆ ಒಂದು ಸಂಸ್ಥೆ ಇದ್ದರೆ ಕಾರ್ಮಿಕರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಇದರಿಂದ ಕಾರ್ಮಿಕರು ಹಾಗೂ ಮಾಲಿಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆ ಇದ್ದರೆ ಅದರಿಂದ ಪರೋಕ್ಷವಾಗಿ ಸಮಾಜಕ್ಕೆ, ಸರ್ಕಾರಕ್ಕೆ ಲಾಭ ಹೆಚ್ಚಿರುತ್ತದೆ. ಲೆಕ್ಕ ಹಾಕುತ್ತಾ ಹೋದರೆ ಅದಕ್ಕೆ ಅಂತಿಮ ಅನ್ನುವುದು ಇರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಹಾಗೂ ಸಾಕಷ್ಟು ಇಲಾಖೆಗಳು ಸ್ಕಾಲರ್ ಶಿಪ್ ಪೋರ್ಟಲ್ ಮುಖಾಂತರ ನೀಡುತ್ತಿರುವುದು ಅತ್ಯಂತ ಪಾರದರ್ಶಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್. ಬಿ. ಮಂಜುಳಾದೇವಿ, ವಿಮಾ ಇಲಾಖೆಯ ಅಧಿಕಾರಿ ರೇಖಾ, ಜಿಲ್ಲಾ ಕಾರ್ಮಿಕರ ಯೋಜನಾ ನಿರ್ದೇಶಕ ಪ್ರಭಾಕರ್, ನಿರೀಕ್ಷಕರುಗಳಾದ ಎಸ್, ಸ್ವಾಮಿ, ಎನ್.ಬಿ ನಾಗರತ್ನ, ಎಂ ಕೃಷ್ಣ, ಅನಿತಾ, ಹೇಮಚಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.




