Tuesday, April 30, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಮಟ್ಟದಲ್ಲಿ ಗಮನ ಸೆಳೆದ ”ಮಂಡ್ಯದ ಕ್ರಿಕೆಟ್ ಪ್ರತಿಭೆ ಕೃತಿಕ್‌ ಕೃಷ್ಣ”

ಮೂಲತಃ  ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ, ಪ್ರಸ್ತುತ ಮಂಡ್ಯನಗರದ ಬಂದೀಗೌಡ ಬಡಾವಣೆಯ ನಿವಾಸಿ ಕೃಷ್ಣಶೆಟ್ಟಿ ಮತ್ತು ಕೃಪಾ ದಂಪತಿಯ ಪುತ್ರ ಕೃತಿಕ್‌ ಕೃಷ್ಣ (23) ರಾಜ್ಯ ಕ್ರಿಕೆಟ್ ಲೋಕದಲ್ಲಿ ಭರವಸೆಯ ಆಟಗಾರನಾಗಿ ಹೊರಹೊಮ್ಮುವ ಮೂಲಕ ಸಕ್ಕರೆ ನಾಡಿಗೆ ಕೀರ್ತಿ ತಂದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 23 ವಯೋಮಿತಿಯ ಸಿ.ಕೆ. ನಾಯ್ಡು ಟ್ರೋಪಿಯನ್ನು ಮೊಟ್ಟಮೊದಲ ಬಾರಿಗೆ ಕರ್ನಾಟಕ ತಂಡ ತನ್ನದಾಗಿಸಿಕೊಂಡ ಸಾಧನೆ ಮಾಡಿದೆ. ಈ ತಂಡದಲ್ಲಿ ಮಂಡ್ಯದ ಭರವಸೆಯ ಪ್ರತಿಭೆ 21ರ ಪ್ರಾಯದ ಕೃತಿಕ್‌ ಕೃಷ್ಣ ಪ್ರಮುಖ ಆಟಗಾರನಾಗಿ ಮಿಂಚಿದ್ದು, ಮಂಡ್ಯ ಜಿಲ್ಲೆಯ ಹೆಗ್ಗಳಿಕೆಯಾಗಿದೆ.

ಭಾರತ ಹಾಗೂ ಕರ್ನಾಟಕ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡುತ್ತಿರುವ ಕೃತಿಕ್, ಎಡಗೈ ಶೈಲಿಯ ಬ್ಯಾಟಿಂಗ್ ಹಾಗೂ ಕೀಪರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಈಗಾಗಲೇ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದು ಇನ್ನಷ್ಟು ಸಾಧನೆ ಮಾಡಲು ಸಿದ್ಧವಾಗುತ್ತಿದ್ದಾರೆ. ಮಾ.10ರಿಂದ 13ರವರೆಗೆ ನಡೆದ ಸಿ.ಕೆ. ನಾಯ್ಡು ಟ್ರೋಪಿ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ ಉತ್ತಮ ಬ್ಯಾಟಿಂಗ್ ಜತೆಗೆ ಕೀಪಿಂಗ್‌ನಲ್ಲಿಯೂ ಗಮನಸೆಳೆದರು.

ಕರ್ನಾಟಕದ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್ ಗಳಿಸುವುದರ ಮೂಲಕ ಯಶೋವರ್ಧನ್ ಜತೆಗೆ 156 ರನ್‌ಗಳ ಜತೆಯಾಟವಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅನೀಸ್ ಜತೆಗೆ 150 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು. ಈ ವೇಳೆ 86 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಮಾತ್ರವಲ್ಲದೆ ಎರಡು ಕ್ಯಾಚ್ ಹಾಗೂ ಒಂದು ಸ್ಟಂಪಿಂಗ್ ಮಾಡಿ ಆಯ್ಕೆದಾರರ ಗಮನಸೆಳೆದಿದ್ದಾರೆ. ಒಟ್ಟಾರೆ ಟೂರ್ನಿಯಲ್ಲಿ 33 ಕ್ಯಾಚ್ ಹಾಗೂ 3 ಸ್ಟಂಪಿಂಗ್ ಮಾಡಿದ್ದಾರೆ. ಇದರೊಂದಿಗೆ ಸಿ.ಕೆ. ನಾಯ್ಡು ಟ್ರೋಪಿಯನ್ನು ಮೊದಲ ಬಾರಿಗೆ ಗೆದ್ದ ತಂಡದಲ್ಲಿ ಪ್ರಮುಖ ಭಾಗವಾಗಿದ್ದರು.

ಮೂರನೇ ತರಗತಿಯಿಂದಲೇ ತರಬೇತಿ

ನಸಕ್ಕರೆ ನಾಡಿನ ಪ್ರತಿಭೆ ಕೃತಿಕ್ ಕೃಷ್ಣ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಪಾಲಕರು, ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗಲೇ ಪಿಇಟಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತುದಾರ ಎಂ.ಮಹದೇವ್ ಅವರಿಂದ ತರಬೇತಿ ಕೊಡಿಸಲು ಪ್ರಾರಂಭಿಸಿದರು. ಅಂದಿನಿಂದ ನಿರಂತರವಾಗಿ ಅಭ್ಯಾಸ ನಡೆಯುತ್ತಿದೆ. ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲಾ ಹಂತದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಶಾಲೆ, ಜಿಲ್ಲಾ, ಡಿವಿಷನ್ ಮಟ್ಟದಲ್ಲಿ ಹಲವು ಟೂರ್ನಿ ಆಡಿದ್ದಾರೆ. ಅಂತೆಯೇ, ಎರಡು ಬಾರಿ ಅಂಡರ್ 14 ಮತ್ತು ಎರಡು ಬಾರಿ ಅಂಡರ್ 16 ಟೂರ್ನಿಯಲ್ಲಿ ಭಾಗವಹಿಸಿದ್ದರು.

2019ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಅಂಡರ್ 19 ಚಾಲೆಂಜರ್ ಟ್ರೋಪಿಗೂ ಮುನ್ನ ಸೂರತ್‌ನಲ್ಲಿ ಆಯೋಜಿಸಿದ್ದ ವಿನೋದ್ ಮಂಕಡ್ ಟೂರ್ನಿಯಲ್ಲಿ ಕರ್ನಾಟಕದ ಪರ ಅಜೇಯ 75 ರನ್ ಗಳಿಸುವುದರ ಜತೆಗೆ ನಾಲ್ಕು ಕ್ಯಾಚ್ ಪಡೆದು ಪಂದ್ಯ ಗೆಲ್ಲಿಸಿಕೊಟ್ಟಿದರು. ಇದು ಆಯ್ಕೆಗಾರರನ್ನು ಸೆಳೆದಿತ್ತು. ಜತೆಗೆ ಕಿರಣ್ ಮೋರೆ ಅವರು ನಡೆಸಿದ 10 ಯುವ ವಿಕೆಟ್ ಕೀಪರ್ ಆಯ್ಕೆಯಲ್ಲಿ ಕೃತಿಕ್ ಸ್ಥಾನ ಪಡೆದಿದ್ದರು. ಈ ಎಲ್ಲವನ್ನು ಗಮನಿಸಿದ ಆಯ್ಕೆಗಾರರು ಚಾಲೆಂಜರ್ ಟ್ರೋಫಿಗೆ ಅವಕಾಶ ನೀಡಿದರು.

ಕೆಪಿಎಲ್ ನಲ್ಲಿ ಗಮನ ಸೆಳೆದ ಆಟಗಾರ

ಈಗಾಗಲೇ ಹಲವು ಮಹತ್ವದ ಟೂರ್ನಿಯಲ್ಲಿ ಮಿಂಚುತ್ತಿರುವ ಕೃತಿಕ್, 2023-24ರ ಕರ್ನಾಟಕ ರಣಜಿ ತಂಡದ ಸಂಭಾವ್ಯ ಆಟಗಾರರಲ್ಲಿ ಸ್ಥಾನ ಪಡೆದಿದ್ದರು. ಇದಲ್ಲದೆ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಅಂತೆಯೇ 2022-23ರಲ್ಲಿ ಅಂಡರ್ 25 ರಾಜ್ಯ ‘ಎ’ ಒನ್ ಡೇ ಟ್ರೋಪಿ, 2023-24 ಅಂಡರ್ 23 ರಾಜ್ಯ ‘ಎ’ ಒನ್ ಡೇ ಟ್ರೋಪಿ ಸೇರಿದಂತೆ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯ ತಂಡದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರಾರಂಭದ ದಿನಗಳಲ್ಲಿ ಮಂಡ್ಯದಲ್ಲಿ ತರಬೇತುದಾರರಾದ  ಎಂ.ಮಹದೇವ್ ಹಾಗೂ ಯರೇಗೌಡ ಅವರಿಂದ ತರಬೇತಿ ಪಡೆದಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!