ಮದ್ದೂರು ಪಟ್ಟಣದಲ್ಲಿ ಕಳೆದ ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಖಂಡಿಸಿ ಇಂದು ನಡೆದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಪರಿಣಾಮ ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಮದ್ದೂರು ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಇಂದು ಬೆಳಿಗ್ಗೆ ಮದ್ದೂರು ಪಟ್ಟಣಕ್ಕೆ ಬಂದ ಸಾವಿರಾರು ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರಿಗೆ ಸ್ಥಳೀಯ ಜನರು ಕೂಡ ಜೊತೆಯಾದರು. ಈ ವೇಳೆ ದೊಡ್ಡ ಸಂಖ್ಯೆಯಲ್ಲಿದ್ದ ಪೋಲೀಸರು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತ ಜನರು ಪೋಲಿಸರನ್ನು ತಳ್ಳಿಕೊಂಡೇ ಮಸೀದಿಯತ್ತ ನುಗ್ಗಲು ಮುಂದಾದಾಗ ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಜನರನ್ನು ಚದುರಿಸಿದರು.ಈ ಸಂದರ್ಭದಲ್ಲಿ ಹಲವರು ಗಾಯಗೊಂಡರು.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಹಲವು ಬಿಜೆಪಿ,ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ಸೇರಿ ಗಲಭೆಗೆ ಕಾರಣರಾದ ತಪ್ಪಿತಸ್ಥರನ್ನು ಬಂಧಿಸುವಂತೆ ಉಗ್ರ ಸ್ವರೂಪದ ಪ್ರತಿಭಟನೆ ಮಾಡಿದರು.ಈ ಸಮಯದಲ್ಲಿ ಭದ್ರತೆಗಾಗಿ ನಿಂತಿದ್ದ ಪೊಲೀಸರ ಜೊತೆಯಲ್ಲಿ ಪ್ರತಿಭಟನಾಕಾರರು ಮಾತಿನ ಚಕಮಕಿ ನಡಿದ್ದಲ್ಲದೆ,ಕೆಲವು ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು.
ಬಿಗಿ ಬಂದೋಬಸ್ತ್
ಬೂದಿ ಮುಚ್ಚಿದ ಕೆಂಡದಂತಿರುವ ಮದ್ದೂರಿನಲ್ಲಿ ಹೆಚ್ಚುವರಿ ಪೊಲೀಸ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮೊಕ್ಕಾಂ ಹೂಡಿ,ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು ಮದ್ದೂರಿನಲ್ಲೇ ವಾಸ್ತವ್ಯ ಹೂಡಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.
ವ್ಯವಸ್ಥಿತ ಪಿತೂರಿ?
ಕಳೆದ ವರ್ಷ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆಯೂ ಇದೇ ರೀತಿ ಗಲಭೆ ನಡೆದಿತ್ತು. ಗಣೇಶ ವಿಸರ್ಜನೆಯ ಮೆರವಣಿಗೆ ಮಸೀದಿಯ ಮುಂದಿನಿಂದ ಸಾಗುವಾಗ ಗಲಭೆ ಉಂಟಾಗಿತ್ತು. ಆ ಘಟನೆಯಲ್ಲಿ ಹತ್ತಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಪಾರ ಪ್ರಮಾಣದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು.ಈ ಬಾರಿ ಜಿಲ್ಲಾಡಳಿತ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಿದ ಹಿನ್ನಲೆಯಲ್ಲಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನೆರವೇರಿತ್ತು.ಆದರೆ ಮದ್ದೂರಿನಲ್ಲಿ ಅಂತಹ ಗಲಾಟೆ ನಡೆಯಲಾರದು ಎಂಬ ಮನೋಭಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರು ಇರದಿದ್ದ ಕಾರಣ ಕಲ್ಲು ತೂರಾಟ ನಡೆದು ಮದ್ದೂರು ಪಟ್ಟಣ ಉದ್ವಿಗ್ನ ಗೊಂಡಿತು ಎಂಬುದು ಸ್ಥಳೀಯ ಜನರ ಮಾತು.
ಠಾಣೆಗೆ ಮುತ್ತಿಗೆ
ಪೊಲೀಸರ ಲಾಠಿ ಪ್ರಹಾರ ಖಂಡಿಸಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಾವಿರಾರು ಯುವಕರು ಪ್ರತಿಭಟನೆ ನಡೆಸುತ್ತಾ , ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಸಾವಿರಾರು ಸಂಘ ಪರಿವಾರದ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ಠಾಣೆಗೆ ಮುತ್ತಿಗೆ ಹಾಕಲು ಹೊರಟಿದ್ದು ಪೊಲೀಸರು ಠಾಣೆಗೆ ಮುತ್ತಿಗೆ ಹಾಕಲು ಹೊರಟವರ ತಡೆಯಲು ಹರಸಾಹಸ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ.




