ಹಸಿದವರಿಗೆ ಅನ್ನ ಹಾಕುವುದು ಮತ್ತು ಅಡುಗೆ ಮಾಡುವ ಕಾಯಕ ಶ್ರೇಷ್ಠವಾದದ್ದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.
ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಅಡುಗೆಯವರ ಮತ್ತು ಅಡುಗೆ ಸಹಾಯಕರುಗಳಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತು ವಿಶೇಷ ಪುನಶ್ಚೇತನ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದದರು.
ವಸತಿ ಶಾಲೆಗಳಲ್ಲಿ ಅಡುಗೆ ಮಾಡುವವರು ವಿದ್ಯಾರ್ಥಿಗಳಿಗೆ ಶುಚಿ ಹಾಗೂ ರುಚಿಯಾದ ಅಡುಗೆ ಮಾಡಿಕೊಟ್ಟರೆ ಅವರು ದೈಹಿಕ ಹಾಗೂ ಮಾನಸಿಕವಾಗಿ ಶಕ್ತಿಯುತರಾಗಿ ತಮ್ಮ ಓದಿನಲ್ಲಿ ಸಂತೋಷದಿಂದ ತೊಡಗಿಕೊಳ್ಳುತ್ತಾರೆ.ಅಡುಗೆ ತಯಾರಕರು ಹಾಗೂ ಸಹಾಯಕರು ಪರಿಶ್ರಮದಿಂದ ಇಲಾಖೆ ಹಾಗೂ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದರು.
ತಮ್ಮ ಕಾಲೇಜಿನ ಜೀವನ ನೆನೆದ ಅವರು ಬಿ ಸಿ ಎಂ ವಿದ್ಯಾರ್ಥಿ ನಿಲಯದಲ್ಲಿ 5 ವರ್ಷಗಳ ಕಾಲ ಕಳೆದ ಸಂದರ್ಭದಲ್ಲಿ ಅಡುಗೆಯವರ ಮತ್ತು ಅಡುಗೆ ಸಹಾಯಕರ ಜೊತೆ ಇದ್ದ ಭಾವನೆಯನ್ನು ಮೆಲುಕು ಹಾಕಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಡುಗೆಯವರ ಕೊಡುಗೆ ಬಹುಮುಖ್ಯವಾದದ್ದು, ಹಾಗಾಗಿ ಎಲ್ಲಾ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಈಗಾಗಲೇ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಜಿಲ್ಲಾ ಮಟ್ಟದ ಸಹಾಯವಾಣಿಯನ್ನು ತೆರೆದಿದ್ದು, ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಮನೆ, ಊಟದ ಮನೆ, ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ಅಳವಡಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಮಂಜುಳಾ, ಹಾಗೂ ಎಲ್ಲಾ ತಾಲೂಕುಗಳ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.




