ಮದ್ದೂರಿನಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದಿಂದ ಉಂಟಾದ ಗಲಭೆಯ ಹಿನ್ನೆಲೆಯಲ್ಲಿ ಮದ್ದೂರು ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ರಾಜ್ಯ ಸರ್ಕಾರವು ಈ ಕುರಿತು ಆದೇಶ ಹೊರಡಿಸಿದ್ದು, ಘಟನೆಯ ಸಂದರ್ಭದಲ್ಲಿ ಶಿವಕುಮಾರ್ ಸ್ಥಳದಲ್ಲಿ ಇರದಿರುವುದು ಅವರ ಅಮಾನತಿಗೆ ಕಾರಣವಾಗಿದೆ.
ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ
ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು,ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ಮೇಲೆ ರಾಮ್ ರಹೀಂ ನಗರದ ಬಳಿ ಕಲ್ಲು ತೂರಾಟ ನಡೆದಿತ್ತು.ಈ ಸಂದರ್ಭದಲ್ಲಿ ಸಿಪಿಐ ಶಿವಕುಮಾರ್ ಅವರು ಸ್ಥಳದಲ್ಲಿರದೆ ಕರ್ತವ್ಯ ಲೋಪವೆಸಗಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಎಸ್ಪಿ ವರ್ಗಾವಣೆಗೆ ಕಲ್ಲುತೂರಾಟ ಕಾರಣವಲ್ಲ

ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರ ವರ್ಗಾವಣೆಗೂ ಗಣೇಶ ವಿಸರ್ಜನೆ ಸಮಯದಲ್ಲಿ ಉಂಟಾದ ಗಲಭೆಗೂ ಸಂಬಂಧವಿಲ್ಲ. ಕಳೆದ ಆರು ತಿಂಗಳ ಹಿಂದೆಯೇ ಅವರ ಅವಧಿ ಮುಕ್ತಾಯಗೊಂಡಿತ್ತು. ಸ್ವತಃ ನಾನೇ ಗೃಹ ಮಂತ್ರಿಗಳ ಜೊತೆ ಮಾತನಾಡಿ ಅವರನ್ನು ಮುಂದುವರಿಸಲು ಬೇಡಿಕೆ ಇಟ್ಟಿದ್ದೆ.ಆದರೆ ಅಷ್ಟರಲ್ಲಿ ಅವರ ವರ್ಗಾವಣೆ ಆಗಿದೆ.ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ. ಆದರಂತೆ ಅವರ ವರ್ಗಾವಣೆಯಾಗಿದೆಯೇ ಹೊರತು ಮದ್ದೂರು ಘಟನೆಯ ಕಾರಣಕ್ಕಲ್ಲ ಎಂದು ತಿಳಿಸಿದ್ದಾರೆ.




