ಹಿಂದಿಯನ್ನು ಒಂದು ಸಂವಹನದ ಭಾಷೆಯಾಗಿ ಗೌರವಿಸುತ್ತೇವೆ, ಪ್ರೀತಿಸುತ್ತೇವೆ, ಅದೇ ಹಿಂದಿ ದಬ್ಬಾಳಿಕೆಯ ಭಾಷೆಯಾದರೆ, ಯಜಮಾನಿಕೆಯ ಭಾಷೆಯಾದರೆ ಧಿಕ್ಕರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ಇತ್ತಿಚೇಗೆ ಮಾತನಾಡಿದ್ದ ಅಮಿತ್ ಶಾ, ಹಿಂದಿ ನ್ಯಾಯಾಂಗ, ಪೊಲೀಸ್, ವಿಜ್ಞಾನ- ತಂತ್ರಜ್ಞಾನದ ಭಾಷೆಯಾಗಬೇಕೆಂದು ಹೇಳಿದ್ದರು. ಇದಕ್ಕೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ‘ನಾನು ಚೆನ್ನಾಗಿ ಹಿಂದಿಯನ್ನು ಮಾತನಾಡಬಲ್ಲೆ, ಅದು ಅಗತ್ಯಕ್ಕೆ ಮಾತ್ರ, ಸಂವಹನಕ್ಕೆ ಮಾತ್ರ. ಕನ್ನಡ ನಮ್ಮ ಆತ್ಮಭಾಷೆ. ಭಾಷೆಗಳು ಬಾಂಧವ್ಯ ಬೆಸೆಯುವುದಕ್ಕೆ ಕಾರಣವಾಗಬೇಕೆ ಹೊರತು ಹೇರಿಕೆಯ ಮೂಲಕ ಸಂಘರ್ಷಕ್ಕೆ ಕಾರಣವಾಗಬಾರದು ಎಂದು ಅವರು ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ ಭಾರತದ ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕು, ಇಲ್ಲದಿದ್ದಲ್ಲಿ ಭಾಷೆಗಳ ಕಾರಣಕ್ಕೆ ಸಂಘರ್ಷ ಉಲ್ಬಣಿಸುತ್ತವೆ. ಧರ್ಮ ರಾಜಕಾರಣದಿಂದ ಆಹಾರ ರಾಜಕಾರಣ, ಭಾಷಾ ರಾಜಕಾರಣದ ಕಡೆ ಹೊರಳಿರುವ ಕೇಂದ್ರ ಸರ್ಕಾರಕ್ಕೆ ಈ ಪ್ರಜ್ಞೆ ಇದ್ದರೆ ಕ್ಷೇಮ ಎಂದು ಅವರು ಬೊಟ್ಟು ಮಾಡಿದ್ದಾರೆ.




