ತೆರಿಗೆ ಇಳಿಕೆಯನ್ನು ದೇಶದ ಎಲ್ಲ ರಾಜ್ಯಗಳು ಸ್ವಾಗತಿಸಿವೆ. ಆದರೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ಮೊಸರಲ್ಲಿ ಕಲ್ಲು ಹುಡುಕುವಂತೆ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ಆರೋಪಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಜಿಎಸ್ಟಿ ಇಳಿಕೆ ಮಾಡಿದ್ದರೂ, ರಾಜ್ಯದ ಕಾಂಗ್ರೆಸ್ ಸರಕಾರ ಅಗತ್ಯ ವಸ್ತುಗಳ ಬಲೆ ಇಳಿಕೆಗೆ ಸಹಕಾರ ನೀಡುತ್ತಿಲ್ಲ. ಜಿಎಸ್ಟಿ ಇಳಿಕೆಯಿಂದಾಗಿ ಹಾಲಿನ ಉತ್ಪನ್ನಗಳು, ಕುರುಕಲು ತಿಂಡಿ, ಪಾತ್ರೆ, ಹೊಲಿಯಂತ್ರದಂತೆ ದಿನನಿತ್ಯದ ಬಳಕೆ ವಸ್ತುಗಳ ಬಲೆ ಕಡಿತಗೊಂಡಿದೆ ಎಂದರು.
ತೆರಿಗೆ ಕಡಿತ ಮಾಡಿರುವುದರಿಂದ ರಾಜ್ಯ ನಷ್ಟ ಎನ್ನುವುದು ಸರಿಯಲ್ಲ, ಬಡವರಿಗೆ ಅಗತ್ಯ ವಸ್ತುಗಳನ್ನು ಕೈಗೆಟುವ ಬೆಲೆಯಲ್ಲಿ ದೊರೆಯುವಂತೆ ಮಾಡುವುದು ಸರಕಾರಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವೂ ತೆರಿಗೆ ಕಡಿತಕ್ಕೆ ಮುಂದಾಗುವ ಮೂಲಕ ತಾನೂ ತೆರಿಗೆ ಇಳಿಸುವಲ್ಲಿ ಮುಂದಿದ್ದೇನೆಂಬ ರೀತಿಯಲ್ಲಿ ರಾಜ್ಯದ ಜನರಿಗೆ ಸಹಕಾರಿಯಾಗಬೇಕೆಂದರು.
ಸರಕಾರವು ನಿಗಮಗಳಿಗೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದೆ. ನಿಗಮಗಳಿಗೆ ಹಣ ದೊರೆಯದ ಕಾರಣ ಆಯಾ ಸಮುದಾಯದವರು ಮೈಕ್ರೋ ಫೈನಾನ್ಸ್ ಮೊರೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡರಾದ ಎಸ್.ಪಿ.ಸ್ವಾಮಿ, ಅಶೋಕ್ ಜಯರಾಂ,ಸಚ್ಚಿದಾನಂದ, ಡಾ.ಸಿದ್ದರಾಮಯ್ಯ, ನಗರ ಅಧ್ಯಕ್ಷ ವಸಂತ್ ಕುಮಾರ್, ಅಶೋಕ್ ಇದ್ದರು.




